ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ತೆರಿಗೆ ವಂಚಕರ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಅಂಥವರ ವಿರುದ್ಧ ದಿಟ್ಟ ಕ್ರಮಕ್ಕೆ ಮುಂದಾಗಿದೆ. 2023ರಲ್ಲಿ ತೆರಿಗೆ ಉಳಿಸಿಕೊಂಡ ಅರ್ಧ ಮಿಲಿಯನ್ (5 ಲಕ್ಷಕ್ಕೂ ಅಧಿಕ) ಜನರ ಮೊಬೈಲ್ ಸಿಮ್ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ.
ಕೇಂದ್ರೀಯ ಕಂದಾಯ ಮಂಡಳಿ (ಎಫ್ಬಿಆರ್) ಆದಾಯ ತೆರಿಗೆ ಇಲಾಖೆ (ಐಟಿಜಿಒ)ಗೆ ಕಳೆದ ವರ್ಷ ತೆರಿಗೆ ಕಟ್ಟದ 5,06,671 ವ್ಯಕ್ತಿಗಳ ಮೊಬೈಲ್ ಸಿಮ್ಗಳ ಬಳಕೆಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಈ ಬಗ್ಗೆ ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಅಥಾರಿಟಿ (ಪಿಟಿಎ) ಮತ್ತು ಎಲ್ಲಾ ಟೆಲಿಕಾಂ ಪೂರೈಕೆದಾರರಿಗೆ ನಿರ್ದೇಶನ ನೀಡಿದ್ದು, ತಮ್ಮ ಕಂಪನಿಯ ಸಿಮ್ಗಳನ್ನು ನಿರ್ಬಂಧಿಸಿದ ವರದಿಯನ್ನು ಮೇ 15ರೊಳಗೆ ಸಲ್ಲಿಸಲು ಸೂಚಿಸಿದ್ದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
ತೆರಿಗೆ ವ್ಯಾಪ್ತಿಯಲ್ಲಿ ಬರುವ 2.4 ಮಿಲಿಯನ್ (20.40 ಲಕ್ಷಕ್ಕೂ ಅಧಿಕ) ಜನರು ತೆರಿಗೆದಾರರ ಪಟ್ಟಿಯಿಂದ ನುಣುಚಿಕೊಂಡಿದ್ದಾರೆ. ಅವರನ್ನು ಗುರುತಿಸಿರುವ ಕೇಂದ್ರೀಯ ಕಂದಾಯ ಮಂಡಳಿ ಕ್ರಮ ಎದುರಿಸಲು ನೋಟಿಸ್ ಜಾರಿ ಮಾಡಿದ್ದಾಗಿ ತಿಳಿದುಬಂದಿದೆ.