ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ): ಇಲ್ಲಿನ ಕುರ್ರಂ ಪ್ರದೇಶದ ಎರಡು ಬುಡಕಟ್ಟುಗಳ ನಡುವಿನ ಸಂಘರ್ಷದಲ್ಲಿ ಇಬ್ಬರು ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಮೂಲಕ ಹತ್ತು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 124 ಮಂದಿ ಸಾವನ್ನಪ್ಪಿದ್ದಾರೆ ಮತ್ತು 178 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರ್ರಂನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೇಶಾವರ - ಪರಚಿನಾರ್ ಮುಖ್ಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಿರುವುದರಿಂದ ದೈನಂದಿನ ಜೀವನ ಮತ್ತು ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ವರದಿಯ ಪ್ರಕಾರ, ಶಾಂತಿಯನ್ನು ಪುನಃಸ್ಥಾಪಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ.
ಡೆಪ್ಯುಟಿ ಕಮಿಷನರ್ ಜಾವೇದ್ ಉಲ್ಲಾ ಮೆಹ್ಸೂದ್ ಅವರು ಎರಡೂ ಬುಡಕಟ್ಟು ಗುಂಪುಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಂಘರ್ಷಣೆಯನ್ನು ನಿಲ್ಲಿಸಲು ಮತ್ತು ಹೆದ್ದಾರಿಯಲ್ಲಿ ಸಂಚಾರವನ್ನು ಪುನರಾರಂಭಿಸುವ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪರಚಿನಾರ್‌ನಲ್ಲಿ ಸಿಲುಕಿರುವ ನ್ಯಾಯಾಧೀಶರು, ಸಿಬ್ಬಂದಿ:ಹಿಂಸಾಚಾರ ಹಿನ್ನೆಲೆ ಇಬ್ಬರು ನ್ಯಾಯಾಧೀಶರು ಮತ್ತು 25 ನ್ಯಾಯಾಂಗ ಸಿಬ್ಬಂದಿ ಕಳೆದ 10 ದಿನಗಳಿಂದ ಪರಚಿನಾರ್‌ನಲ್ಲಿ ಸಿಲುಕಿದ್ದಾರೆ ಎಂದು ಸದ್ದಾ ತಹಸಿಲ್ ಬಾರ್‌ನ ಅಧ್ಯಕ್ಷರು ತಿಳಿಸಿದ್ದಾರೆ. ಸರ್ಕಾರ ಅವರನ್ನು ಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ ಮಾಡಲು ಸೂಚಿಸಿದ್ದರೂ, ಇಲ್ಲಿಯವರೆಗೆ ಯಾವುದೇ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿಲ್ಲ.