ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚೀನಾ ಸ್ಥಾಪಿಸಿರುವ ವಿದ್ಯುತ್ ಸ್ಥಾವರಗಳ 493 ಬಿಲಿಯನ್ ರೂ.ಗಳ ಬಾಕಿಯನ್ನು ಪಾವತಿಸಲು ಹೆಚ್ಚುವರಿ ಬಜೆಟ್ ಅನ್ನು ನಿಗದಿಪಡಿಸುವ ಯೋಜನೆ ಇಲ್ಲ ಎಂದು ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಭರವಸೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿದ್ಯುತ್ ಕಳ್ಳತನ ತಡೆಗಟ್ಟಲು ಪಾಕಿಸ್ತಾನ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಐಎಂಎಫ್ ಸಂಶಯ ವ್ಯಕ್ತಪಡಿಸಿದೆ.
ಈ ಹಣಕಾಸು ವರ್ಷದಲ್ಲಿ ಚೀನಾದ ವಿದ್ಯುತ್ ಸ್ಥಾವರಗಳಿಗೆ ಪಾವತಿಸಲು ಬಜೆಟ್ನಲ್ಲಿ ಮೀಸಲಿಡಲಾದ 48 ಬಿಲಿಯನ್ ರೂ.ಗಿಂತ ಹೆಚ್ಚಿನ ಮೊತ್ತವನ್ನು ಹಂಚಿಕೆ ಮಾಡುವ ಪಾಕಿಸ್ತಾನ ಸರ್ಕಾರದ ನಿರ್ಧಾರದ ಬಗ್ಗೆ ಐಎಂಎಫ್ ಪ್ರಶ್ನೆ ಮಾಡಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಚೀನಾದ ವಿದ್ಯುತ್ ಸ್ಥಾವರಗಳ ಬಾಕಿ ಸಾಲ ಮರುಪಾವತಿಸಲು ಹೆಚ್ಚುವರಿ ಹಣ ಮೀಸಲಿಡುವ ಯಾವುದೇ ಯೋಜನೆ ಇಲ್ಲ ಎಂದು ಪಾಕಿಸ್ತಾನ ಐಎಂಎಫ್ ಗೆ ತಿಳಿಸಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿದ್ಯುತ್ ಯೋಜನೆಗಳ ಬಾಕಿಯು ಜನವರಿ ಅಂತ್ಯದ ವೇಳೆಗೆ ದಾಖಲೆಯ 493 ಬಿಲಿಯನ್ ರೂ.ಗೆ ಅಥವಾ 1.8 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಈ ಮೊತ್ತವು ಕಳೆದ ವರ್ಷದ ಜೂನ್ಗೆ ಹೋಲಿಸಿದರೆ 214 ಬಿಲಿಯನ್ ರೂ. ಅಥವಾ ಶೇಕಡಾ 77 ರಷ್ಟು ಹೆಚ್ಚಾಗಿದೆ.
ಪಾಕಿಸ್ತಾನಕ್ಕೆ ಸಾಲ ನೀಡದಂತೆ ಪಿಟಿಐ ಮನವಿ: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನೊಂದಿಗೆ ಸಂಬಂಧ ಹೊಂದಿರುವ ಕೆಲ ವ್ಯಕ್ತಿಗಳು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗಿನ ಪಾಕಿಸ್ತಾನದ ಒಪ್ಪಂದವನ್ನು ಹಾಳುಮಾಡಲು ಪ್ರಯತ್ನಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವರು ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಆರ್ಥಿಕ ಸ್ಥಿರತೆಗೆ ಈ ಒಪ್ಪಂದವು ನಿರ್ಣಾಯಕವಾಗಿದೆ ಎಂದು ಸಚಿವರು ಹೇಳಿದ್ದಾರೆ.
ವಾಷಿಂಗ್ಟನ್ನ ಐಎಂಎಫ್ ಕಚೇರಿಯ ಮುಂದೆ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು ಪ್ರತಿಭಟನೆ ನಡೆಸಿ, ಪಾಕಿಸ್ತಾನಕ್ಕೆ ಯಾವುದೇ ಹೊಸ ಸಾಲ ನೀಡಬಾರದು ಎಂದು ಐಎಂಎಫ್ಗೆ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಐಎಂಎಫ್ ಅಧಿಕಾರಿಗಳಿಗೆ ಪಿಟಿಐ ಮನವಿ ಸಲ್ಲಿಸಲು ಯತ್ನಿಸಿತ್ತು. ಆದರೆ ಮನವಿ ಸ್ವೀಕರಿಸಲು ನಿರಾಕರಿಸಿದ ಐಎಂಎಫ್ ಅಧಿಕಾರಿಗಳು ಮನವಿಯನ್ನು ಇಮೇಲ್ ಮಾಡುವಂತೆ ಹೇಳಿದ್ದರು.
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ವಿಶ್ವಾಸಾರ್ಹ ತನಿಖೆ ನಡೆದು ಎಲ್ಲಾ ಆರೋಪಗಳ ಬಗ್ಗೆ ನ್ಯಾಯ ಸಿಗುವವರೆಗೂ ಪಾಕಿಸ್ತಾನಕ್ಕೆ ಯಾವುದೇ ಹೆಚ್ಚಿನ ಹಣಕಾಸಿನ ನೆರವು ಅಥವಾ ಸಾಲ ವಿತರಣೆಯನ್ನು ತಡೆಹಿಡಿಯುವಂತೆ ಪಿಟಿಐ ತನ್ನ ಪತ್ರದಲ್ಲಿ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಅವರನ್ನು ಒತ್ತಾಯಿಸಿದೆ ಎಂದು ಡಾನ್ ವರದಿ ಮಾಡಿದೆ.
ಇದನ್ನೂ ಓದಿ : ಗಾಜಾದ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ, ಆಹಾರ ಕ್ಷಾಮದ ಆತಂಕ