ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಬುಡಕಟ್ಟು ಗುಂಪುಗಳ ಘರ್ಷಣೆ: 65 ಜನರ ಸಾವಿನ ನಂತರ 7 ದಿನಗಳ ಕದನವಿರಾಮ - PAKISTAN TRIBAL GROUPS CLASH

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬುಡಕಟ್ಟು ಗುಂಪುಗಳ ಮಧ್ಯೆ ಕದನವಿರಾಮ ಜಾರಿಯಾಗಿದೆ.

ಪಾಕಿಸ್ತಾನದಲ್ಲಿ ಬುಡಕಟ್ಟು ಗುಂಪುಗಳ ಘರ್ಷಣೆ
ಪಾಕಿಸ್ತಾನದಲ್ಲಿ ಬುಡಕಟ್ಟು ಗುಂಪುಗಳ ಘರ್ಷಣೆ (IANS)

By ETV Bharat Karnataka Team

Published : Nov 25, 2024, 6:21 PM IST

ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಕುರ್ರಾಮ್ ಜಿಲ್ಲೆಯ ಖೈಬರ್ ಪಖ್ತುಂಖ್ವಾ (ಕೆಪಿ) ಪ್ರಾಂತ್ಯದ ಎರಡು ಬುಡಕಟ್ಟು ಗುಂಪುಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಬುಡಕಟ್ಟು ಗುಂಪುಗಳ ಘರ್ಷಣೆಯಲ್ಲಿ 65 ಜನ ಸಾವಿಗೀಡಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗಗಳು ಏಳು ದಿನಗಳ ಕಾಲ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಎಲ್ಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಾಹಿತಿ ಸಚಿವ ಮತ್ತು ಪ್ರಾಂತೀಯ ಸರ್ಕಾರದ ವಕ್ತಾರ ಮುಹಮ್ಮದ್ ಅಲಿ ಸೈಫ್ ಭಾನುವಾರ ಮಾಧ್ಯಮಗಳಿಗೆ ತಿಳಿಸಿದರು.

ಮಾತುಕತೆಗೆ ಅನುಕೂಲವಾಗುವಂತೆ ಸರ್ಕಾರದ ಕ್ರಮ:"ಮಾತುಕತೆಗೆ ಅನುಕೂಲವಾಗುವಂತೆ ಸರ್ಕಾರದ ತಂಡವು ಸ್ಥಳೀಯ ನಾಯಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಪರಸ್ಪರರ ಸೆರೆಯಾಳುಗಳನ್ನು ಹಿಂದಿರುಗಿಸಲು ಪಕ್ಷಗಳು ಸಂಪೂರ್ಣ ಒಪ್ಪಂದಕ್ಕೆ ಬಂದಿವೆ" ಎಂದು ಅವರು ಹೇಳಿದರು.

ಗುರುವಾರ, ಶಿಯಾ ಮುಸ್ಲಿಮರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕರ ಬೋಗಿಗಳ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿದ ನಂತರ ಪ್ರಾಂತ್ಯದ ಕುರ್ರಾಮ್ ಜಿಲ್ಲೆಯಲ್ಲಿ ಘರ್ಷಣೆಗಳು ಭುಗಿಲೆದ್ದಿದ್ದು, 45 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 16 ಜನರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕನಿಷ್ಠ 65 ಸಾವು, ಡಜನ್​​ಗಟ್ಟಲೆ ಮಂದಿ ಸ್ಥಿತಿ ಗಂಭೀರ:ಸರ್ಕಾರಿ ಅಧಿಕಾರಿಗಳ ಪ್ರಕಾರ, ಗುರುವಾರದ ದಾಳಿಯ ನಂತರ ಸಾವಿನ ಸಂಖ್ಯೆ ಕನಿಷ್ಠ 65 ಕ್ಕೆ ಏರಿದೆ ಮತ್ತು ಎರಡೂ ಗುಂಪುಗಳು ಪ್ರತೀಕಾರದ ಹಿಂಸಾಚಾರಕ್ಕೆ ಇಳಿದಿದ್ದರಿಂದ ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ.

ಕುರ್ರಾಮ್ ಜಿಲ್ಲೆಯು ಪಂಥೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ, ಸೆಪ್ಟೆಂಬರ್​ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಎರಡೂ ಪಂಥಗಳ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಫೈಸಲ್ ಕರೀಮ್ ಕುಂಡಿ ತಿಳಿಸಿದ್ದಾರೆ.

ಕುರ್ರಾಮ್ ಕಾಬೂಲ್ ನ ದಕ್ಷಿಣ ಮತ್ತು ಪೂರ್ವದಲ್ಲಿ ಅಫ್ಘಾನ್ ಪ್ರಾಂತ್ಯಗಳಾದ ಲೋಗರ್, ಪಕ್ತಿಯಾ, ಖೋಸ್ಟ್ ಮತ್ತು ನಂಗರ್ ಹಾರ್ ಗೆ ಹೊಂದಿಕೊಂಡಿದೆ ಮತ್ತು ಅದರ ಪಶ್ಚಿಮದಲ್ಲಿ 192 ಕಿ.ಮೀ ಡುರಾಂಡ್ ರೇಖೆಯ ಉದ್ದಕ್ಕೂ ಅನೇಕ ಗಡಿ ಕ್ರಾಸಿಂಗ್​​ಗಳನ್ನು ಹೊಂದಿದೆ. ಇದರಲ್ಲಿ ಐತಿಹಾಸಿಕ ಪೈವಾರ್ ಕೊಟಾಲ್ ಪಾಸ್ ಕೂಡ ಸೇರಿದೆ.

ಕುರ್ರಾಮ್​​ನ 7.85 ಲಕ್ಷ ಜನಸಂಖ್ಯೆಯಲ್ಲಿ (2023 ರ ಜನಗಣತಿ) 99% ಕ್ಕೂ ಹೆಚ್ಚು ಪಶ್ತೂನ್​​ಗಳು ತುರಿ, ಬಂಗಾಶ್, ಜೈಮುಶ್ತ್, ಮಂಗಲ್, ಮುಖ್ಬಾಲ್, ಮಸುಜೈ ಮತ್ತು ಪರಚಮ್ಕಣಿ ಬುಡಕಟ್ಟುಗಳಿಗೆ ಸೇರಿದವರು. ತುರಿ ಮತ್ತು ಕೆಲವು ಬಂಗಾಶ್ ಗಳು ಶಿಯಾ ಆಗಿದ್ದು, ಉಳಿದವರು ಸುನ್ನಿಗಳಾಗಿದ್ಧಾರೆ.

ಇದನ್ನೂ ಓದಿ :ಭಾರತ 1 ದಿನದಲ್ಲಿ 640 ಮಿಲಿಯನ್​ ಮತಗಳನ್ನು ಎಣಿಸಿದೆ, ಕ್ಯಾಲಿಫೋರ್ನಿಯಾ ಇನ್ನೂ ಎಣಿಸುತ್ತಲೇ ಇದೆ: ಎಲಾನ್ ಮಸ್ಕ್

ABOUT THE AUTHOR

...view details