ಇಸ್ಲಾಮಾಬಾದ್ (ಪಾಕಿಸ್ತಾನ):ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್ ನಲ್ಲಿ ಭಾರಿ ಜಯ ಲಭಿಸಿದೆ. ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮೀಸಲು ಸ್ಥಾನಗಳಿಗೆ ಅರ್ಹವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ 13 ಸದಸ್ಯರ ಪೀಠ ಶುಕ್ರವಾರ ತೀರ್ಪು ನೀಡಿದೆ.
ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಇಮ್ರಾನ್ ಅವರ ಪಕ್ಷಕ್ಕೆ ಮೀಸಲು ಸ್ಥಾನಗಳನ್ನು ನೀಡದಿರುವ ನಿರ್ಧಾರ ಮಾಡಿದ್ದ ಪಾಕಿಸ್ತಾನದ ಚುನಾವಣಾ ಆಯೋಗವನಗನು (ಇಸಿಪಿ) ಟೀಕಿಸಿದೆ. ಚುನಾವಣಾ ಆಯೋಗದ ಈ ನಿರ್ಧಾರವು 'ಅಸಿಂಧು' ಎಂದು ಘೋಷಿಸಿದ ಪೀಠವು 'ಪಾಕಿಸ್ತಾನದ ಸಂವಿಧಾನದ ವಿರುದ್ಧ' ವಾಗಿದೆ ಎಂದು ತಿಳಿಸಿದೆ. ಸುನ್ನಿ ಇತ್ತಿಹಾದ್ ಕೌನ್ಸಿಲ್ (SIC) ಅರ್ಜಿಯ ಪರವಾಗಿ ಪಾಕ್ನ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷಕ್ಕೆ ದೊಡ್ಡ ಕಾನೂನು ಜಯ ಸಿಕ್ಕಿದೆ. ಈಗ ಒಟ್ಟಾಗಿ ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ವಾಸ್ತವವಾಗಿ, ಈ ಪಕ್ಷವು ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲು ಸ್ಥಾನಗಳನ್ನು ಹಂಚಿಕೆ ಮಾಡಲು ಅರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.
ಇಸಿಪಿಯು ಪಕ್ಷದ ಚಿಹ್ನೆಯಾಗಿ ಬ್ಯಾಟ್ ಅನ್ನು ನಿಷೇಧಿಸಿದ ನಂತರ ಫೆಬ್ರವರಿ 8 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಸ್ಪರ್ಧಿಸುವ ಹಕ್ಕನ್ನು ಕಳೆದುಕೊಂಡಿತು. ಇಮ್ರಾನ್ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ನಂತರ ಅವರು ಎಸ್‌ಐಸಿ ಪಕ್ಷಕ್ಕೆ ಸೇರಿ ಮೈತ್ರಿ ಮಾಡಿಕೊಂಡರು. ಆದರೆ, ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಅನುಪಾತದಲ್ಲಿ ಪಕ್ಷಗಳಿಗೆ ನೀಡಬೇಕಾದ ಮೀಸಲು ಸ್ಥಾನಗಳನ್ನು ಎಸ್‌ಐಸಿಗೆ ಹಂಚಿಕೆ ಮಾಡಲಾಗಿಲ್ಲ.
ಎಸ್‌ಐಸಿ ಇದಕ್ಕೆ ಅರ್ಹರಲ್ಲ ಎಂದು ಇಸಿಪಿ ಆದೇಶ ಹೊರಡಿಸಿತ್ತು. ಪಾಕಿಸ್ತಾನ ಚುನಾವಣಾ ಆಯೋಗದ ಈ ಆದೇಶ ಪ್ರಶ್ನಿಸಿ, ಇಮ್ರಾನ್ ಖಾನ್ ಬೆಂಬಲಿಗರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈಗ ಸುಪ್ರೀಂ ಈ ಬಗ್ಗೆ ಮಹತ್ವದ ತೀರ್ಪು ನೀಡಿದ್ದು, ಇಮ್ರಾನ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೀಸಲು ಸ್ಥಾನಗಳ ಮೂಲಕ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳನ್ನು ಪ್ರವೇಶಿಸಲಿದ್ದಾರೆ. ಇದು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಒಕ್ಕೂಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ 86 ಸ್ಥಾನಗಳನ್ನು ಹೊಂದಿರುವ ಪಿಟಿಐ 23 ಮೀಸಲು ಸ್ಥಾನಗಳನ್ನು ಪಡೆಯುತ್ತದೆ. ಮತ್ತು ಅದರ ಸಂಸದರ ಸಂಖ್ಯೆ 109ಕ್ಕೆ ಹೆಚ್ಚಳವಾಗುತ್ತದೆ. ಪ್ರತಿಪಕ್ಷಗಳ ಮೈತ್ರಿಕೂಟದ ಬಲವೂ 120ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ:ಚೀನಾದ ಐಸ್ಪೇಸ್ ರಾಕೆಟ್ ಪತನ: 3 ಉಪಗ್ರಹಗಳು ನಾಶ - China rocket fails