ಓಸ್ಲೋ (ನಾರ್ವೆ) :ನಾರ್ವೆಯ ಅತಿದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಬಿಲಿಯನೇರ್ ಓಲಾವ್ ಥಾನ್ ನಿಧನರಾಗಿದ್ದಾರೆ. ತಮ್ಮ ಅಪಾರ ಸಂಪತ್ತನ್ನು ಬಿಟ್ಟು ಇಹಲೋಹಕ್ಕೆ ಗುಡ್ಬೈ ಹೇಳಿದ್ದಾರೆ.
ಓಲಾವ್ ಥಾನ್ಗೆ 101 ವರ್ಷ ವಯಸ್ಸಾಗಿತ್ತು. "ಒಲವ್ ಥಾನ್ ನಿಧನರಾಗಿದ್ದಾರೆ ಎಂಬ ದುಖಃಕರ ಸುದ್ದಿಯನ್ನು ತಿಳಿಸಲು ಕಷ್ಟವಾಗುತ್ತಿದೆ ಎಂದು ಒಲಾವ್ ಥಾನ್ ಗ್ರುಪ್ಪೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ವಯೋಸಹಜ ಕಾರಣಗಳಿಂದ ಮೃತರಾಗಿದ್ದಾರೆ ಎಂದು ಅವರು ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಥಾನ್ ಜೂನ್ 29, 1923 ರಂದು ಓಸ್ಲೋದ ವಾಯುವ್ಯದಲ್ಲಿರುವ ಹಾಲಿಂಗ್‌ಡಾಲ್ ಕಣಿವೆಯ ಎಐ ಗ್ರಾಮದಲ್ಲಿ ಜನಿಸಿದರು. ಅವರು ಆರಂಭದಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಯೋಜಿಸಿದ್ದರು. ಆದರೆ ಆಗ 2ನೇ ವಿಶ್ವಯುದ್ಧ ಇದ್ದುದರಿಂದ ಅವರಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಅದರ ಬದಲಿಗೆ ಚರ್ಮದ ಉದ್ಯಮ ಆರಂಭಿಸಿದರು. ಇದಕ್ಕಾಗಿ ಅವರು ಪ್ರಾಣಿಗಳನ್ನು ಸಾಕಲು ಶುರು ಮಾಡಿದರು.
ಥಾನ್ ಅಂತಿಮವಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಅಪ್ಪಿಕೊಂಡರು. ರಿಯಲ್ ಎಸ್ಟೇಟ್ ಉದ್ಯಮ ಪ್ರವೇಶ ಮಾಡಿದ ಬಳಿಕ ಅವರು ಆರಂಭದಲ್ಲಿ ಶುರು ಮಾಡಿದ್ದ ಚರ್ಮದ ವ್ಯಾಪಾರಕ್ಕೆ ಬೈ ಬೈ ಹೇಳಿದರು. 1950ರಲ್ಲಿ ಅವರ ಮೊದಲ ಅಪಾರ್ಟ್ಮೆಂಟ್ ವೊಂದನ್ನು ಖರೀದಿಸುವ ಮೂಲಕ ಈ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಅವರು ಈ ಕ್ಷೇತ್ರದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ನಾರ್ವೆ ಮತ್ತು ನೆರೆಯ ಸ್ವೀಡನ್‌ನಲ್ಲಿ 80 ಕ್ಕೂ ಹೆಚ್ಚು ಶಾಪಿಂಗ್ ಮಾಲ್ಗಳನ್ನು ತೆರೆದು ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿಕೊಂಡರು.
ಕಂಪನಿಯ ಪ್ರಕಾರ, ಥಾನ್ ನಾರ್ವೆ, ಸ್ವೀಡನ್ಗಳಲ್ಲದೇ ಬೆಲ್ಜಿಯಂ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ನಲ್ಲಿ ಸುಮಾರು 90 ಹೋಟೆಲ್‌ಗಳನ್ನು ಹೊಂದಿದ್ದಾರೆ. 2013ರಲ್ಲಿ ಅವರು ಕಂಪನಿಯ ಹೆಚ್ಚಿನ ಆಸ್ತಿಗಳನ್ನು ಒಲಾವ್ ಥಾನ್ ಫೌಂಡೇಶನ್‌ಗೆ ವರ್ಗಾಯಿಸಿದ್ದಾರೆ.
ಅವರ ದೀರ್ಘಕಾಲದ ಪತ್ನಿ ಇಂಗೆ-ಜೊಹಾನ್ನೆ ಥಾನ್ 2018 ರಲ್ಲಿ ಮರಣಹೊಂದಿದ್ದರು. ಆ ಬಳಿಕ ಅವರು ತಮ್ಮ 95ನೇ ವರ್ಷದಲ್ಲಿ ಓಸ್ಲೋದಲ್ಲಿನ ಶತಮಾನದ ಹಳೆಯ ಹೋಟೆಲ್ ಬ್ರಿಸ್ಟಲ್‌ನಲ್ಲಿ ಸಿಸ್ಸೆಲ್ ಬರ್ಡಾಲ್ ಹಗಾ ಅವರನ್ನ ವಿವಾಹವಾಗಿದ್ದರು.
ಇದನ್ನೂ ಓದಿ :ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್ನ ದಿಗ್ಗಜ ರತನ್ ಟಾಟಾ ಇನ್ನಿಲ್ಲ