ಮಸ್ಕತ್/ನವದೆಹಲಿ: ಒಮನ್ ಕರಾವಳಿಯಲ್ಲಿ ಮುಳುಗಿದ ತೈಲ ಹಡಗಿನ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆ ಧಾವಿಸಿದೆ. ಹಡಗಿನಲ್ಲಿ ಸಿಲುಕಿದ್ದ ಎಂಟು ಭಾರತೀಯರು ಸೇರಿದಂತೆ 9 ಸಿಬ್ಬಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಿದ್ದೇನು?: ಒಮನ್‌ನ ರಾಸ್ ಮದ್ರಾಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲು ದೂರದಲ್ಲಿ ಜುಲೈ 14ರಂದು ಕೊಮೊರೊಸ್ ದೇಶದ ಧ್ವಜ ಹೊಂದಿದ್ದ ತೈಲ ಪೂರೈಕೆಯ 'ಪ್ರೆಸ್ಟೀಜ್ ಫಾಲ್ಕನ್' ಹೆಸರಿನ ಹಡಗು ಮಗುಚಿ ಬಿದ್ದಿತ್ತು. ಈ ಹಡಗಿನಲ್ಲಿದ್ದ 13 ಭಾರತೀಯರು ಹಾಗೂ ಶ್ರೀಲಂಕಾದ ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದರು. ಜುಲೈ 15ರಂದು ಘಟನೆ ಬೆಳಕಿಗೆ ಬಂದಿತ್ತು.
ರಕ್ಷಣೆಗೆ ಧಾವಿಸಿದ ಭಾರತದ ಯುದ್ಧನೌಕೆ: ಜುಲೈ 16ರಂದು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಒಮಾನ್‌ನ ಕಡಲ ಭದ್ರತಾ ಕೇಂದ್ರದ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯ ಶುರು ಮಾಡಿದ್ದರು. ಈ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯೂ ಕೈಜೋಡಿಸಿದೆ. ಇದಕ್ಕೆ 'ಐಎನ್ಎಸ್ ಟೆಗ್' ಯುದ್ಧನೌಕೆಯನ್ನು ನಿಯೋಜಿಸಲಾಗಿದೆ. ಜೊತೆಗೆ, ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಒಮಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇದುವರೆಗೆ ಭಾರತದ ಒಂಬತ್ತು ಸಿಬ್ಬಂದಿಯ ಪೈಕಿ ಎಂಟು ಮತ್ತು ಒಬ್ಬ ಶ್ರೀಲಂಕಾ ಪ್ರಜೆಯನ್ನು ರಕ್ಷಿಸಲಾಗಿದೆ.
ಸವಾಲಿನ ರಕ್ಷಣಾ ಕಾರ್ಯ: ''ಒಮಾನ್ ಕರಾವಳಿಯಲ್ಲಿ ಮುಳುಗಿದ ಹಡಗಿನ ಶೋಧಕ್ಕಾಗಿ ಒಮಾನ್ ಅಧಿಕಾರಿಗಳು ಮತ್ತು ಭಾರತೀಯ ನೌಕಾಪಡೆ ಕಾರ್ಯಾಚರಣೆ ಕೈಗೊಂಡಿದೆ. 9 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಉಳಿದ ಸಿಬ್ಬಂದಿಯ ಪತ್ತೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದೆ. ಒರಟು ಸಮುದ್ರದ ಅಲೆಗಳು ಮತ್ತು ಪ್ರಬಲವಾದ ಗಾಳಿಯ ಸವಾಲಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಭಾರತೀಯ ನೌಕಾಪಡೆಯ ಲಾಂಗ್ ರೇಂಜ್ ಮ್ಯಾರಿಟೈಮ್ ವಿಚಕ್ಷಣ ವಿಮಾನ ಪಿ8ಐ ಅನ್ನೂ ನಿಯೋಜಿಸಲಾಗಿದೆ'' ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಜುಲೈ 17ರಂದು ರಾತ್ರಿ 9:14ರ ಸುಮಾರಿಗೆ ಪೋಸ್ಟ್ ಮಾಡಿದೆ.
ಮತ್ತೊಂದೆಡೆ, ರಾತ್ರಿ 9:42ರ ಸುಮಾರಿಗೆ ಒಮಾನ್‌ನ ಕಡಲ ಭದ್ರತಾ ಕೇಂದ್ರ ಪೋಸ್ಟ್ ಮಾಡಿ, ''ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೈಲ ಹಡಗಿನ 10 ಸಿಬ್ಬಂದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಈ ಪೈಕಿ 9 ಮಂದಿ ಜೀವಂತವಾಗಿದ್ದಾರೆ. ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರೆದಿದೆ'' ಎಂದು ಮಾಹಿತಿ ನೀಡಿದೆ.
ಮುಳುಗಡೆಯಾದ ಹಡಗು ದುಬೈನ ಹಮ್ರಿಯಾ ಬಂದರಿನಿಂದ ಹೊರಟು ಯೆಮೆನ್ ಬಂದರು ನಗರಿ ಏಡೆನ್‌ಗೆ ಹೋಗುತ್ತಿತ್ತು. ಈ ವೇಳೆ, ಒಮಾನ್ ಕರಾವಳಿಯಲ್ಲಿ ಮಗುಚಿ ಬಿದ್ದಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಇದನ್ನೂ ಓದಿ:ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಹಡಗು: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ