ಅಬುಜಾ(ನೈಜೀರಿಯಾ): ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಟ್ಯಾಂಕರ್ ಪಲ್ಟಿಯಾದ ನಂತರ ನೂರಾರು ಜನ ಸೋರುತ್ತಿದ್ದ ತೈಲ ಸಂಗ್ರಹಿಸಲು ಹೋಗಿದ್ದು, ಈ ಸಂದರ್ಭದಲ್ಲಿ ಸ್ಪೋಟ ಸಂಭವಿಸಿ ಅಪಾರ ಸಾವುನೋವು ಸಂಭವಿಸಿತು ಎಂದು ಪೊಲೀಸರು ಹೇಳಿದ್ದಾರೆ.
ಜಿಗಾವಾ ರಾಜ್ಯದ ಮಜಿಯಾ ಪಟ್ಟಣದಲ್ಲಿ ಮಧ್ಯರಾತ್ರಿಯ ನಂತರ ವಿಶ್ವವಿದ್ಯಾಲಯದ ಹತ್ತಿರದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಟ್ಯಾಂಕರ್ನ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದರು.
ಅಪಘಾತ ಸಂಭವಿಸಿದ ನಂತರ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಇಂಧನ ಸಂಗ್ರಹಿಸುತ್ತಿದ್ದರು. ಆ ಸಮಯದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡು ಅನೇಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಆಡಮ್ ಹೇಳಿದರು.