ಕೋಪನ್ ಹ್ಯಾಗನ್; ವಿಶ್ವಾದ್ಯಂತ ಘರ್ಷಣೆಗಳ ಪ್ರಮಾಣ ಹೆಚ್ಚುತ್ತಲೇ ಸಾಗುತ್ತಿದೆ. ಮತ್ತೊಂದು ಕಡೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುವ ರಾಷ್ಟ್ರಗಳ ಪ್ರಮಾಣವೂ ಕೂಡಾ ಹೆಚ್ಚಾಗುತ್ತಲೇ ಸಾಗಿದೆ ಎಂದು ಸ್ವೀಡಿಷ್ ಥಿಂಕ್ ಟ್ಯಾಂಕ್ ಕಳವಳ ವ್ಯಕ್ತಪಡಿಸಿದೆ. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಪ್ರಕಟಿಸಿದ ಹೊಸ ವರದಿಯ ಪ್ರಕಾರ, ಕಾರ್ಯಾಚರಣಾ ಪರಮಾಣು ಸಿಡಿತಲೆಗಳ ಸಂಖ್ಯೆಯು ಸ್ಥಿರವಾಗಿ ಏರುತ್ತಿದೆ ಎಂದು ತಿಳಿಸಿದೆ.
"ಶೀತಲ ಸಮರದ ಕಾಲದ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಕ್ರಮೇಣ ಜಾಗತಿಕ ಒಟ್ಟು ಪರಮಾಣು ಸಿಡಿತಲೆಗಳು ಕುಸಿಯುತ್ತಲೇ ಇದ್ದರೂ, ವಿಷಾದನೀಯವಾಗಿ ನಾವು ಕಾರ್ಯಾಚರಣಾ ಪರಮಾಣು ಸಿಡಿತಲೆಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವನ್ನು ನೋಡುತ್ತಿದ್ದೇವೆ ಎಂದು SIPRI ನಿರ್ದೇಶಕ ಡಾನ್ ಸ್ಮಿತ್ ಹೇಳಿದ್ದಾರೆ.
ಈ ಪ್ರವೃತ್ತಿಯು ಮುಂದುವರಿಯುವ ಸಾಧ್ಯತೆಯಿದೆ ಮತ್ತು ಮುಂಬರುವ ವರ್ಷಗಳಲ್ಲಿ ಬಹುಶಃ ಇವು ಮತ್ತಷ್ಟು ವೇಗವನ್ನು ಪಡೆದುಕೊಳ್ಳಬಹುದು ಎಂದು ವಾಚ್ಡಾಗ್ ಹೇಳಿದ್ದು, ಇದು ಅತ್ಯಂತ ಕಳವಳಕಾರಿ ಅಂತಾನೂ ಅಭಿಪ್ರಾಯಪಟ್ಟಿದೆ. ಅಭಿವೃದ್ಧಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜನವರಿಯಲ್ಲಿ ವಿಶ್ವಾದ್ಯಂತ ಒಟ್ಟು 12,121 ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಸುಮಾರು 9,585 ಸಂಭಾವ್ಯ ಸಿಡಿತಲೆಗಳು ಬಳಕೆ ಸಿದ್ದವಾಗಿದ್ದು, ಶಸ್ತ್ರಾಗಾರಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.