ಪೋರ್ಟ್ ಲೂಯಿಸ್ (ಮಾರಿಷಸ್) :ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ನೆರೆಯ ಮಾರಿಷಸ್ ಸರ್ಕಾರ ಸಂತಾಪ ಸೂಚಿಸಿದೆ. ಅವರ ಅಂತ್ಯಕ್ರಿಯೆ ಹಿನ್ನೆಲೆ ಶನಿವಾರ ಇಡೀ ದಿನ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ಸಲ್ಲಿಸಿದೆ.
ಭಾರತದ ಮಾಜಿ ಪ್ರಧಾನಿಗೆ ಗೌರವ ಸೂಚಿಸಲು ಶನಿವಾರ ಸೂರ್ಯಾಸ್ತದವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲಿನ ಮಾರಿಷಸ್ ಧ್ವಜವನ್ನು ಅರ್ಧಕ್ಕೆ ಹಾರಿಸಲು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿತ್ತು.
ಅಂತ್ಯಕ್ರಿಯೆಯಲ್ಲಿ ವಿದೇಶಾಂಗ ಸಚಿವ ಭಾಗಿ:ಶನಿವಾರ ಜರುಗಿದ ಆರ್ಥಿಕ ತಜ್ಞನ ಅಂತ್ಯಕ್ರಿಯೆಯಲ್ಲಿ ಮಾರಿಷಸ್ ಸರ್ಕಾರದ ವಿದೇಶಾಂಗ ಸಚಿವ ಧನಂಜಯ್ ರಾಮ್‌ಫುಲ್ ಅವರು ಭಾಗವಹಿಸಿದ್ದರು. ದೆಹಲಿಗೆ ಆಗಮಿಸಿದ್ದ ಅವರು, ಡಾ. ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಮನಮೋಹನ್ ಸಿಂಗ್ ಅವರ ಸಾವಿನ ಸುದ್ದಿ ತಿಳಿದ ಮಾರಿಷಸ್ ಪ್ರಧಾನಿ ನವೀನ್ ರಾಮಗೂಲಂ ಅವರು ರಾಜಧಾನಿ ಪೋರ್ಟ್ ಲೂಯಿಸ್‌ನಲ್ಲಿರುವ ಭಾರತದ ಹೈಕಮಿಷನ್‌ಗೆ ಶುಕ್ರವಾರ ಭೇಟಿ ನೀಡಿ, ಅಲ್ಲಿದ್ದ ಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಬಳಿಕ ಸಂತಾಪ ಪುಸ್ತಕದಲ್ಲಿ ಸಹಿ ಹಾಕಿದರು. ಮಾರಿಷಸ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಈ ಚಿತ್ರಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.