ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್ - ಇ - ಇನ್ಸಾಫ್ (ಪಿಟಿಐ) ಪಕ್ಷದ ಸರ್ಕಾರಿ ವಿರೋಧಿ 'ಅಂತಿಮ ಹೋರಾಟ' ಪ್ರತಿಭಟನಾ ರ‍್ಯಾಲಿಯು ಭಾನುವಾರ ಖೈಬರ್ ಪಖ್ತುನಖ್ವಾದ ಪೇಶಾವರದಿಂದ ಪ್ರಾರಂಭವಾಗಿದ್ದು, ಸದ್ಯ ಇಸ್ಲಾಮಾಬಾದಿನ ಹೊರವಲಯ ತಲುಪಿದೆ. ರ‍್ಯಾಲಿಯು ರಾಜಧಾನಿ ಇಸ್ಲಾಮಾಬಾದ್ ಒಳಗಡೆ ಪ್ರವೇಶಿಸದಂತೆ ತಡೆಯಲು ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ತನ್ನ ಪತಿ ಜೈಲಿನಿಂದ ಬಿಡುಗಡೆಯಾಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ.
ರ‍್ಯಾಲಿ ಮುನ್ನಡೆಸುತ್ತಿರುವ ಅಲಿ ಅಮೀನ್ ಗಂಡಾಪುರ್:ಬುಶ್ರಾ ಬೀಬಿ ಅವರೊಂದಿಗೆ, ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಕೂಡ ರ‍್ಯಾಲಿಯನ್ನು ಮುನ್ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಇಮ್ರಾನ್ ಖಾನ ಬೆಂಬಲಿಗರು ರ‍್ಯಾಲಿಗೆ ಜೊತೆಯಾಗುತ್ತಿದ್ದಾರೆ. ಭಾನುವಾರ ಇಸ್ಲಾಮಾಬಾದ್ನಿಂದ ಕೆಲ ಕಿಲೋಮೀಟರ್ ದೂರದಲ್ಲಿ ಕ್ಯಾಂಪ್ ಹೂಡಿದ್ದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳ ಯೋಧರು ರಬ್ಬರ್ ಗುಂಡುಗಳನ್ನು ಫೈರ್ ಮಾಡಿದ್ದಾರೆ.
ಪ್ರತಿಭಟನಾಕಾರರು ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯಲು ಇಸ್ಲಾಮಾಬಾದ್ ಗೆ ಹೋಗುವ ರಸ್ತೆಗಳಲ್ಲಿ ಹಲವಾರು ಹಡಗು ಕಂಟೇನರ್ಗಳನ್ನು ಅಡ್ಡಲಾಗಿ ಇರಿಸಲಾಗಿದೆ.
ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಬುಶ್ರಾ ಬೀಬಿ:ಪಿಟಿಐ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಬುಶ್ರಾ ಬೀಬಿ, ಇಮ್ರಾನ್ ಖಾನ್ ಅವರ ಬಿಡುಗಡೆ ಖಚಿತಪಡಿಸಿಕೊಳ್ಳಲು ಎಲ್ಲರೂ ಮುಂದೆ ಸಾಗಬೇಕು ಎಂದು ಕರೆ ನೀಡಿದರು.
"ನಾವು ನಮ್ಮ ರ‍್ಯಾಲಿಯನ್ನು ಮುಂದುವರಿಯುತ್ತೇವೆ ಮತ್ತು ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿಸಿಕೊಳ್ಳದೇ ಮರಳಿ ಹೋಗುವುದಿಲ್ಲ. ಇಮ್ರಾನ್ ಖಾನ್ ಬಿಡುಗಡೆಯಾಗುವವರೆಗೂ ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ. ನನ್ನೊಂದಿಗೆ ಯಾರೂ ನಿಲ್ಲದಿದ್ದರೂ, ಇಮ್ರಾನ್ ಖಾನ್ ಇಲ್ಲದೇ ನಾನು ಹಿಂತಿರುಗುವುದಿಲ್ಲ. ಖೈಬರ್ ಪಖ್ತುಂಖ್ವಾದ ಪಠಾಣ್ಗಳು ತಮ್ಮ ಶಕ್ತಿಯನ್ನು ತೋರಿಸಬೇಕೆಂದು ಕರೆ ನೀಡುತ್ತೇನೆ. ಪಠಾಣ್ಗಳು ತಮ್ಮ ಗೌರವ ಮತ್ತು ಘನತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದರು.
ಪಿಟಿಐ ಬೆಂಬಲಿಗರು ಇಸ್ಲಾಮಾಬಾದ್ನ ಡಿ - ಚೌಕ್ ನಲ್ಲಿ ಸಮಾವೇಶಗೊಳ್ಳಲು ನಿಗದಿಪಡಿಸಿದ್ದು, ಈ ಮಹತ್ವದ ಸ್ಥಳದಲ್ಲಿ ಪ್ರತಿಭಟನಾ ಧರಣಿ ನಡೆಸಲು ಯೋಜಿಸಿದ್ದಾರೆ. ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸುವುದರ ಜೊತೆಗೆ, ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜನಾದೇಶವನ್ನು ಮರಳಿ ನೀಡಬೇಕು ಮತ್ತು 26 ನೇ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಮತ್ತೊಂದೆಡೆ, ದೇಶದ ರಾಜಧಾನಿಯಲ್ಲಿ ಹಿಂಸಾಚಾರ ಮತ್ತು ಅವ್ಯವಸ್ಥೆಯನ್ನು ಹರಡಲು ಪಿಟಿಐ ಬೆಂಬಲಿಗರಿಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಬುಡಕಟ್ಟು ಗುಂಪುಗಳ ಘರ್ಷಣೆ: 65 ಜನರ ಸಾವಿನ ನಂತರ 7 ದಿನಗಳ ಕದನವಿರಾಮ