ಕೊಲಂಬೊ:ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ನಡುವೆಯೇ ಶ್ರೀಲಂಕಾ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದೆ. ಶನಿವಾರ (ಸೆ.21) ಮತದಾನ ನಡೆದ ಚುನಾವಣೆ ಮುಗಿದಿದ್ದು, ಭಾನುವಾರ ಪ್ರಕಟವಾದ ಫಲಿತಾಂಶದಲ್ಲಿ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸಾನಾಯಕೆ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ.
ಭಾನುವಾರ ನಡೆದ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ 56 ವರ್ಷದ ದಿಸ್ಸಾನಾಯಕೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (ಎಸ್‌ಜೆಬಿ)ದ ನಾಯಕ ಸಜಿತ್ ಪ್ರೇಮದಾಸ್ ಅವರನ್ನು ಸೋಲಿಸಿದರು. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದು ಭಾರಿ ನಿರಾಸೆ ಅನುಭವಿಸಿದರು.
ಭರ್ಜರಿ ಜಯ ಗಳಿಸಿರುವ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಪಿಪಿ ತಿಳಿಸಿದೆ. ಶನಿವಾರ ನಡೆದ ಮೊದಲ ಸುತ್ತಿನ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿಯು ಶೇಕಡಾ 50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗ ಎರಡನೇ ಸುತ್ತಿನ ಮತ ಎಣಿಕೆಗೆ ಸೂಚಿಸಿತ್ತು. ದಿಸ್ಸಾನಾಯಕೆ ಅವರು ದೇಶದ 9ನೇ ಅಧ್ಯಕ್ಷರಾಗಿ ಅಧಿಕಾರ ನಡೆಸಲಿದ್ದಾರೆ.