ಮಾಲೆ:ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಭಾರಿ ಗೆಲುವು ದಾಖಲಿಸಿದೆ. ಚೀನಾ ಪರ ನಿಲುವು ಹೊಂದಿರುವ ಅಧ್ಯಕ್ಷ ಮೊಹಮದ್ ಮುಯಿಝು ಅವರ ಪಕ್ಷವು ಮಾಲ್ಡೀವ್ಸ್‌ನ ಸಂಸತ್ ಚುನಾವಣೆಯಲ್ಲಿ ಬಹುಮತಕ್ಕಿಂತ 19 ಹೆಚ್ಚು ಸ್ಥಾನಗಳನ್ನು ಗಳಿಸಿದೆ ಎಂದು ಭಾನುವಾರ ಪ್ರಕಟವಾದ ಫಲಿತಾಂಶದಿಂದ ತಿಳಿದು ಬಂದಿದೆ.
93 ಸದಸ್ಯರ ಸದನಕ್ಕೆ ನಡೆದ ಚುನಾವಣೆಯಲ್ಲಿ ಘೋಷಣೆಯಾದ 86 ಸ್ಥಾನಗಳಲ್ಲಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) 66 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಮಾಲ್ಡೀವ್ಸ್ ಚುನಾವಣಾ ಆಯೋಗ ಪ್ರಕಟಿಸಿದೆ. ಉಳಿದ ಏಳು ಸ್ಥಾನಗಳ ಫಲಿತಾಂಶಗಳು ಇನ್ನೂ ಪ್ರಕಟವಾಗಬೇಕಿರುವಾಗ ಮುಯಿಝು ಅವರ ಪಿಎನ್‌ಸಿ ಪಕ್ಷ ಬಹುಮತದ 47 ಸ್ಥಾನಗಳಿಗಿಂತ 19 ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಮುಯಿಝು ಅವರ ಪಕ್ಷಕ್ಕೆ ಭಾರಿ ಗೆಲುವು ಲಭಿಸಿರುವುದನ್ನು ಗಮನಿಸಿದರೆ, ಅಧ್ಯಕ್ಷರು ಭಾರತದ ಬದಲಾಗಿ ಚೀನಾದ ಕಡೆಗೆ ರಾಜಕೀಯವಾಗಿ ವಾಲಿದ್ದರೂ ಅವರ ದೇಶದ ಜನರು ಪಿಎನ್ಸಿಗೆ ಬೆಂಬಲ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ಗೆ ವಿರುದ್ಧ ಆಯ್ಕೆಯಾದ ಅಧ್ಯಕ್ಷ ಮುಯಿಝು, ತನ್ನ ನೆರೆಹೊರೆಯವರೊಂದಿಗಿನ ಸಂಬಂಧವನ್ನು ಅಪಾಯಕ್ಕೆ ದೂಡಿದ್ದರು. ಭಾರತದ ನೀತಿಯನ್ನು ತೊಡೆದುಹಾಕಲು ನಿರ್ಧಾರ ಮಾಡಿದ್ದರು. ಕಳೆದ ವಾರ ನ್ಯಾಯಾಲಯವು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಬ್ದುಲ್ಲಾ ಯಮೀನ್ ಅವರಿಗೆ ವಿಧಿಸಿದ್ದ 11 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸಿತ್ತು. ನಂತರ ಅಬ್ದುಲ್ಲಾ ಯಮೀನ್ ಅವರು ಬಿಡುಗಡೆಯಾಗಿದ್ದರು. ಆದರೆ, ಈ ಚುನಾವಣೆಯಲ್ಲಿ ಮುಖ್ಯ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳೊಂದಿಗೆ ಭಾರಿ ಸೋಲು ಅನುಭವಿಸಿದೆ.