ಬೈರುತ್/ಜೆರುಸಲೇಂ: ಲೆಬನಾನ್ ರಾಜಧಾನಿಯಲ್ಲಿ ಸೀಮಿತ ಮತ್ತು ಸ್ಥಳೀಯ ಭೂ ಆಕ್ರಮಣ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ಬೆನ್ನಲ್ಲೇ ಮಂಗಳವಾರ ಮುಂಜಾನೆ ಬೈರುತ್ನ ದಕ್ಷಿಣ ಉಪನಗರ ವ್ಯಾಪ್ತಿಯಲ್ಲಿ ಇಸ್ರೇಲ್ ಬೃಹತ್ ಪ್ರಮಾಣದ ದಾಳಿಗಳನ್ನು ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಲೆಬನಾನ್ನಲ್ಲಿ ಭೂ ಆಕ್ರಮಣ ಆರಂಭಿಸಿರುವುದನ್ನು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಖಚಿತಪಡಿಸಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಡಿಎಫ್, "ಉನ್ನತ ಮಟ್ಟದ ರಾಜಕೀಯ ನಿರ್ಧಾರಕ್ಕೆ ಅನುಗುಣವಾಗಿ, ಕೆಲ ಗಂಟೆಗಳ ಹಿಂದೆ, ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ನೆಲೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಐಡಿಎಫ್ ಸೀಮಿತ, ಸ್ಥಳೀಯ ಮತ್ತು ನಿರ್ದಿಷ್ಟ ಭೂ ಆಕ್ರಮಣಗಳನ್ನು ಪ್ರಾರಂಭಿಸಿದೆ" ಎಂದು ಹೇಳಿದೆ.
"ಇಸ್ರೇಲಿ ವಾಯುಪಡೆ ಮತ್ತು ಐಡಿಎಫ್ ಫಿರಂಗಿ ದಳವು ಈ ಪ್ರದೇಶದ ಮಿಲಿಟರಿ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸುವ ಮೂಲಕ ಭೂ ಆಕ್ರಮಣಕ್ಕಾಗಿ ಸೇನಾ ಪಡೆಗಳನ್ನು ಬೆಂಬಲಿಸುತ್ತಿವೆ" ಎಂದು ಪೋಸ್ಟ್ ಹೇಳಿದೆ.
ಉತ್ತರ ಇಸ್ರೇಲ್ ಗಡಿಯಲ್ಲಿ ವಾಸಿಸುವ ಜನರಿಗೆ ನೇರವಾಗಿ ಅಪಾಯವನ್ನುಂಟು ಮಾಡುವಂತಹ ಗಡಿಯ ಹತ್ತಿರದ ಹಳ್ಳಿಗಳಲ್ಲಿರುವ ನೆಲೆಗಳನ್ನು ಗುರಿಯಾಗಿಸಿ ಭೂ ಆಕ್ರಮಣ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಐಡಿಎಫ್ ತಿಳಿಸಿದೆ. ಲೆಬನಾನ್ನ ಹರೆಟ್ ಹ್ರೀಕ್, ಮ್ರೀಜೆ ಮತ್ತು ಲೈಲಾಕಿಯಲ್ಲಿನ ನಿವಾಸಿಗಳು ತಕ್ಷಣವೇ ಈ ಪ್ರದೇಶವನ್ನು ತೊರೆಯಬೇಕು ಎಂದು ದಾಳಿಯ ಮೊದಲು ಇಸ್ರೇಲ್ ಪಡೆಗಳು ಎಚ್ಚರಿಕೆ ನೀಡಿವೆ.