ಕರ್ನಾಟಕ

karnataka

ETV Bharat / international

ಇಂಡೋನೇಷ್ಯಾದಲ್ಲಿ ಲಾವಾ ಪ್ರವಾಹದಿಂದ 58 ಜನರ ಸಾವು; ಹಲವರು ನಾಪತ್ತೆ - INDONESIA FLOODS - INDONESIA FLOODS

ಇಂಡೋನೇಷ್ಯಾದಲ್ಲಿ ಸಂಭವಿಸಿದ ಲಾವಾ ಪ್ರವಾಹದಿಂದ 58 ಜನ ಸಾವಿಗೀಡಾಗಿದ್ದಾರೆ.

Death toll in Indonesia's lava floods rises to 58
Death toll in Indonesia's lava floods rises to 58 (ians)

By ETV Bharat Karnataka Team

Published : May 15, 2024, 4:21 PM IST

ಜಕಾರ್ತಾ : ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಪ್ರವಾಹ ಮತ್ತು ತಣ್ಣಗಿನ ಲಾವಾ ಮಣ್ಣಿನ ರಾಡಿಯ ಹರಿವಿನಿಂದ (ಲಾವಾ ಪ್ರವಾಹ) ಸಾವನ್ನಪ್ಪಿದವರ ಸಂಖ್ಯೆ 58 ಕ್ಕೆ ಏರಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಬುಧವಾರ ತಿಳಿಸಿದೆ.

ವಾರಾಂತ್ಯದಲ್ಲಿ ಸುರಿದ ತೀವ್ರ ಮಾನ್ಸೂನ್ ಮಳೆಯಿಂದಾಗಿ ಪಶ್ಚಿಮ ಸುಮಾತ್ರಾದ ಹಲವಾರು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಮರಾಪಿ ಪರ್ವತದಿಂದ ಶೀತ ಲಾವಾ ಮತ್ತು ಮಣ್ಣಿನ ಹರಿವು ಇಳಿಜಾರುಗಳಲ್ಲಿ ಹರಿದು ವಸತಿ ಪ್ರದೇಶಗಳನ್ನು ಮುಳುಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

35 ಜನರು ಇನ್ನೂ ಕಾಣೆಯಾಗಿದ್ದು, 33 ಜನರು ಗಾಯಗೊಂಡಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿವೆ ಎಂದು ವರದಿಗಳು ತಿಳಿಸಿವೆ.

ಲಹಾರ್​ಗಳು ಎಂದೂ ಕರೆಯಲ್ಪಡುವ ಶೀತ ಲಾವಾ ಪ್ರವಾಹಗಳು ಜ್ವಾಲಾಮುಖಿಯಿಂದ ಹೊರಬಂದ ಮಣ್ಣಿನ ರಾಡಿಯ ಪ್ರವಾಹವಾಗಿದೆ. ಭಾರಿ ಮಳೆಯು ಸಡಿಲವಾದ ಜ್ವಾಲಾಮುಖಿ ವಸ್ತುಗಳನ್ನು ಒಟ್ಟುಗೂಡಿಸಿದಾಗ ಸ್ಫೋಟದ ಸಮಯದಲ್ಲಿ ಅಥವಾ ನಂತರ ಇಂಥ ಶೀತ ಲಾವಾ ಪ್ರವಾಹಗಳು ಉಂಟಾಗುತ್ತವೆ.

ವಿಪತ್ತಿನಲ್ಲಿ ಹಾನಿಗೊಳಗಾದ ಅಥವಾ ನಾಶವಾದ ರಸ್ತೆಗಳು ಮತ್ತು ಸೇತುವೆಗಳನ್ನು ಪುನಃ ಸ್ಥಾಪಿಸುವ ಪ್ರಯತ್ನಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ರಸ್ತೆಗಳು ಹಾಳಾಗಿರುವುದರಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ ಎಂದು ವಿಪತ್ತು ಏಜೆನ್ಸಿಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಹರ್ಯಂಟೊ ಹೇಳಿದರು.

ಹೆಲಿಕಾಪ್ಟರ್​ಗಳ ಮೂಲಕ ಹಲವಾರು ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ತಲುಪಿಸಲಾಗುತ್ತಿದೆ. ಮನೆ ಹಾನಿಗೊಳಗಾದ ನಿವಾಸಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಮಳೆಯ ಪ್ರಮಾಣವನ್ನು ಕಡಿಮೆ ಮಾಡಲು ದೇಶದ ಹವಾಮಾನ ಸಂಸ್ಥೆ ಶೀಘ್ರದಲ್ಲೇ ಪರಿಸರ ಮಾರ್ಪಾಡು ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದೆ ಎಂದು ಅವರು ತಿಳಿಸಿದರು.

ಪೊಲೀಸರು, ಸೈನಿಕರು ಮತ್ತು ಸ್ಥಳೀಯ ರಕ್ಷಣಾ ದಳಗಳು ಸೇರಿದಂತೆ ಸುಮಾರು 400 ಜನ ಕನಿಷ್ಠ ಎಂಟು ಅಗೆಯುವ ಯಂತ್ರಗಳು ಮತ್ತು ಡ್ರೋನ್​ಗಳನ್ನು ಬಳಸಿಕೊಂಡು ಕಾಣೆಯಾದವರನ್ನು ಹುಡುಕುತ್ತಿದ್ದಾರೆ. ಇಂಡೋನೇಷ್ಯಾವು ಪೆಸಿಫಿಕ್ "ರಿಂಗ್ ಆಫ್ ಫೈರ್" ನಲ್ಲಿ ನೆಲೆಗೊಂಡಿರುವುದರಿಂದ ದೇಶದಲ್ಲಿ ಆಗಾಗ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತಿರುತ್ತವೆ.

2022 ರಲ್ಲಿ ಸುಮಾತ್ರಾ ದ್ವೀಪದಲ್ಲಿ ಪ್ರವಾಹ ಉಂಟಾಗಿದ್ದರಿಂದ ಸುಮಾರು 24,000 ಜನರನ್ನು ಸ್ಥಳಾಂತರಿಸಲಾಗಿತ್ತು ಮತ್ತು ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು. ನಿರಂತರವಾಗಿ ಮರಗಳನ್ನು ಕಡಿದು ಅರಣ್ಯನಾಶ ಮಾಡುತ್ತಿರುವುದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ : ಇರಾನ್​​ನ ಚಬಹಾರ್ ಬಂದರು ನಿರ್ವಹಣೆಗಾಗಿ 10 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ - Chabahar Port Contract

ABOUT THE AUTHOR

...view details