ಟೆಲ್ ಅವೀವ್: ಒತ್ತೆಯಾಳುಗಳ ಒಪ್ಪಂದ ಮತ್ತು ಕದನ ವಿರಾಮದ ತನ್ನ ಇತ್ತೀಚಿನ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದ ನಂತರ ಕತಾರ್ನಿಂದ ಸಂಧಾನ ತಂಡವನ್ನು ಇಸ್ರೇಲ್ ವಾಪಸ್ ಕರೆಸಿಕೊಂಡಿದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ನೇತೃತ್ವದ ನಿಯೋಗ ಸಂಧಾನ ಮಾತುಕತೆಗಾಗಿ ಎಂಟು ದಿನಗಳಿಂದ ದೋಹಾದಲ್ಲಿತ್ತು. ಸದ್ಯ ಈ ನಿಯೋಗ ಇಸ್ರೇಲ್ಗೆ ವಾಪಸ್ ಬಂದಿದೆ.
ಹಮಾಸ್ ಪರವಾಗಿ ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯಸ್ಥಿಕೆದಾರರು ಮುಂದಿಟ್ಟ ಷರತ್ತುಗಳಿಗೆ ಮಣಿಯುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಮತ್ತೆ ಸಂಪೂರ್ಣ ಕದನ ವಿರಾಮ, ಇಸ್ರೇಲಿ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದು ಮತ್ತು ಯುದ್ಧ ಪ್ರಾರಂಭವಾದಾಗಿನಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ ಉತ್ತರ ಗಾಜಾದಲ್ಲಿನ ಪ್ಯಾಲೆಸ್ಟೈನಿಯರಿಗೆ ಪುನರ್ವಸತಿ ಕಲ್ಪಿಸುವ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.
ಏತನ್ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ರಾತ್ರಿ ಹೇಳಿಕೆ ನೀಡಿದ್ದು, "ಹಮಾಸ್ ಶಾಶ್ವತ ಕದನ ವಿರಾಮ ಬಯಸಿದೆ ಮತ್ತು ಅಮೆರಿಕ ಮಧ್ಯಸ್ಥಿಕೆಯ ರಾಜಿ ಸಂಧಾನವನ್ನು ತಿರಸ್ಕರಿಸುವ ಮೂಲಕ ಅದು ಮಾತುಕತೆಗಳನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು. "ಹಮಾಸ್ನ ಅವಾಸ್ತವಿಕ ಬೇಡಿಕೆಗಳಿಗೆ ಇಸ್ರೇಲ್ ಮಣಿಯುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.