ಟೆಲ್ ಅವೀವ್ : ಇಸ್ರೇಲ್ನ ರಕ್ಷಣಾ ಸಾಧನಗಳ ರಫ್ತು ಕಳೆದ ವರ್ಷ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಇಸ್ರೇಲಿ ಶಸ್ತ್ರಾಸ್ತ್ರ ರಫ್ತು 2023 ರಲ್ಲಿ ಸುಮಾರು 12.9 ಬಿಲಿಯನ್ ಡಾಲರ್ಗೆ ಸಮನಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ. ಈ ಮೂಲಕ ಇಸ್ರೇಲ್ ಸತತ ಮೂರನೇ ವರ್ಷ ಶಸ್ತ್ರಾಸ್ತ್ರ ರಫ್ತು ದಾಖಲೆಗಳನ್ನು ಮುರಿದಿದೆ.
"ಪ್ರಸ್ತುತ ಗಾಜಾದೊಂದಿಗೆ ಯುದ್ಧದಲ್ಲಿ ನಿರತವಾಗಿದ್ದರೂ, ಈ ವರ್ಷ ಇಸ್ರೇಲ್ ತನ್ನ ಅಂತಾರಾಷ್ಟ್ರೀಯ ಸಹಕಾರ ಮತ್ತು ಕೈಗಾರಿಕಾ ರಕ್ಷಣಾ ರಫ್ತುಗಳಲ್ಲಿ ಯಶಸ್ವಿಯಾಗುತ್ತಿದೆ" ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದರು. ಸಚಿವಾಲಯದ ಪ್ರಕಾರ, ಶೇಕಡಾ 36 ರಷ್ಟು ಆದಾಯವು ಕ್ಷಿಪಣಿ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಕ್ಷೇತ್ರದಲ್ಲಿನ ಒಪ್ಪಂದಗಳಿಂದ ಬಂದಿದೆ.
ಇಸ್ರೇಲ್ನ ಶೇ 48ರಷ್ಟು ಶಸ್ತ್ರಾಸ್ತ್ರಗಳು ಏಷ್ಯಾ-ಪೆಸಿಫಿಕ್ ಪ್ರದೇಶಕ್ಕೆ, ಶೇ 35ರಷ್ಟು ಯುರೋಪ್ ಮತ್ತು ಶೇ 9ರಷ್ಟು ಉತ್ತರ ಅಮೆರಿಕಕ್ಕೆ ರಫ್ತಾಗುತ್ತಿವೆ. ಲ್ಯಾಟಿನ್ ಅಮೆರಿಕ ಮತ್ತು ಅರಬ್ ದೇಶಗಳಿಗೆ ಕೂಡ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಇಸ್ರೇಲ್ನಿಂದ ರಫ್ತಾಗಿವೆ. ಇದರ ಪ್ರಮಾಣ ಕೇವಲ ಶೇ 1 ರಷ್ಟಿದೆ. ಶಸ್ತ್ರಾಸ್ತ್ರ ಮಾರಾಟಕ್ಕಾಗಿ ಕೆಲ ಅರಬ್ ದೇಶಗಳೊಂದಿಗೆ ಇಸ್ರೇಲ್ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಜರ್ಮನಿಯು ಇಸ್ರೇಲ್ನಿಂದ ದೂರಗಾಮಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಆರೋ 3 ಅನ್ನು ಖರೀದಿಸಿದೆ. ಇದು 2025 ರಲ್ಲಿ ಜರ್ಮನಿಗೆ ಲಭ್ಯವಾಗಲಿದೆ.