ಸನಾ(ಯೆಮೆನ್): ಹೌತಿ ಬಂಡುಕೋರರ ಹಿಡಿತದಲ್ಲಿರುವ ಕೆಂಪು ಸಮುದ್ರದ ಬಂದರು ನಗರ ಹೊದೈದಾದಲ್ಲಿನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಇಸ್ರೇಲ್, ಅವುಗಳನ್ನು ಧ್ವಂಸಗೊಳಿಸಿದೆ. ಈ ದಾಳಿಗೆ ಇಸ್ರೇಲ್ ವಿರುದ್ಧ ಪ್ರತೀಕಾರದ ದಾಳಿ ನಡೆಸುವುದಾಗಿ ಹೌತಿ ಗುಂಪು ಪ್ರತಿಜ್ಞೆ ಮಾಡಿದೆ.
"ಇಸ್ರೇಲ್ನ ಶತ್ರು ಪಡೆಗಳು ಹೊದೈದಾ ಮೇಲೆ ಕ್ರೂರವಾಗಿ ದಾಳಿ ಮಾಡಿದ್ದಾರೆ. ನಾಗರಿಕ ಆವಾಸಸ್ಥಾನಗಳಲ್ಲಿನ ವಿದ್ಯುತ್ ಕೇಂದ್ರ, ಬಂದರು ಮತ್ತು ಇಂಧನ ಸಂಗ್ರಹಣಾ ಕೇಂದ್ರಗಳ ಮೇಲೆ ಈ ದಾಳಿಗಳು ನಡೆದಿವೆ" ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ದೂರದರ್ಶನ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಇಸ್ರೇಲ್ನ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಲು ನಾವು ಹಿಂಜರಿಯುವುದಿಲ್ಲ. ಮುಂದಿನ ದಿನಗಳಲ್ಲಿ ಟೆಲ್ ಅವೀವ್ ಸುರಕ್ಷಿತ ನಗರವಾಗಿ ಉಳಿಯಲಾರದು" ಎಂದು ಅವರು ಪುನರುಚ್ಚರಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ಫೈಟರ್ ಜೆಟ್ಗಳು ಹೊದೈದಾ ಬಂದರು ನಗರದಲ್ಲಿನ ಹೌತಿ ನೆಲೆಗಳನ್ನು ನಾಶ ಪಡಿಸಿವೆ ಎಂದು ಇದಕ್ಕೂ ಮುನ್ನ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ದಾಳಿಯಿಂದ ತೈಲ ಸಂಗ್ರಹಾಗಾರಗಳು ಹಲವಾರು ಗಂಟೆಗಳವರೆಗೆ ಹೊತ್ತಿ ಉರಿಯುತ್ತಿದ್ದವು ಎಂದು ನಿವಾಸಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಕ್ಸಿನ್ಹುವಾಗೆ ತಿಳಿಸಿದ್ದಾರೆ.