ಟೆಲ್ ಅವಿವ್ (ಇಸ್ರೇಲ್): ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದ ಉತ್ತರದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೈನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ - ಫರಾ ನಿರಾಶ್ರಿತರ ಶಿಬಿರದ ಮೇಲೆ ನಡೆದ ವಾಯು ದಾಳಿಯಲ್ಲಿ ಐವರು ಮತ್ತು ಜೆನಿನ್ನಲ್ಲಿ ಡ್ರೋನ್ ದಾಳಿ ಮತ್ತು ಸಶಸ್ತ್ರ ಘರ್ಷಣೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜೆನಿನ್ ಮತ್ತು ತುಲ್ಕರ್ಮ್ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆ ಈ ದಾಳಿಗಳನ್ನು ಸಮರ್ಥಿಸಿಕೊಂಡಿದೆ. ಜೆನಿನ್, ತುಲ್ಕರ್ಮ್, ನಬ್ಲುಸ್ ಮತ್ತು ಟುಬಾಸ್ ಈ ನಾಲ್ಕು ಪ್ಯಾಲೆಸ್ಟೈನ್ ನಗರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಇಸ್ರೇಲ್ ಮತ್ತೊಂದು ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿದೆ.
2000 ರಿಂದ 2005 ರವರೆಗೆ ನಡೆದ ಪ್ರಮುಖ ಪ್ಯಾಲೆಸ್ಟೈನ್ ದಂಗೆಯಾದ ಎರಡನೇ ಇಂತಿಫಾಡಾದ ನಂತರ ಇದೇ ಮೊದಲ ಬಾರಿಗೆ ಹಲವಾರು ಪ್ಯಾಲೆಸ್ಟೈನ್ ನಗರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಜೆನಿನ್ ನಗರದ ನಿರಾಶ್ರಿತರ ಶಿಬಿರದಲ್ಲಿ ಸಶಸ್ತ್ರ ಘರ್ಷಣೆಗಳು ನಡೆದಿದ್ದು, ನಗರದೊಳಗೆ ಹೋಗುವ ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಬೆಳಗಿನ ಸಮಯದಲ್ಲಿ ಹತ್ತಿರದ ಹಳ್ಳಿಯೊಂದರಲ್ಲಿನ ವಾಹನದ ಮೇಲೆ ಇಸ್ರೇಲ್ ದಾಳಿ ಮಾಡಿದೆ.