ಬಾಗ್ದಾದ್ (ಇರಾಕ್) :ಸಲಿಂಗಕಾಮವು ಇನ್ನು ಮುಂದೆ ಇರಾಕ್ನಲ್ಲಿ ಅಪರಾಧವೆಂದು ಪರಿಗಣಿತವಾಗಲಿದೆ. ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ಇರಾಕ್ ಸಂಸತ್ತು ಅಂಗೀಕರಿಸಿದೆ. ಸಲಿಂಗಕಾಮದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವನೆ ಹೊಸ ಕಾನೂನಿನಲ್ಲಿದೆ.
ಸಲಿಂಗಕಾಮಕ್ಕೆ 10 ರಿಂದ 15 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮತ್ತು ವೇಶ್ಯಾವಾಟಿಕೆ ಹಾಗೂ ಸಲಿಂಗ ಸಂಬಂಧಗಳನ್ನು ಯಾವುದೇ ರೀತಿಯಲ್ಲಿ ಉತ್ತೇಜಿಸುವುದನ್ನು ನಿಷೇಧಿಸುವ 1988 ರ ವೇಶ್ಯಾವಾಟಿಕೆ ವಿರೋಧಿ ಕಾನೂನಿನ ತಿದ್ದುಪಡಿಗೆ ಇರಾಕ್ ಸಂಸತ್ತು ಶನಿವಾರ ಮತ ಚಲಾಯಿಸಿತು.
ಇರಾಕ್ ಸಂಸತ್ತಿನ ಹಂಗಾಮಿ ಮುಖ್ಯಸ್ಥ ಮೊಹ್ಸೆನ್ ಅಲ್-ಮಂಡಲವಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಸಮಾಜದ ಮೌಲ್ಯಗಳನ್ನು ರಕ್ಷಿಸಲು, ನೈತಿಕ ಅಧಃಪತನ ಮತ್ತು ಸಲಿಂಗಕಾಮದ ಕ್ರಿಯೆಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಹಾಗೂ ರಾಷ್ಟ್ರದ ಸರ್ವೋಚ್ಚ ಹಿತಾಸಕ್ತಿಯನ್ನು ರಕ್ಷಿಸಲು ಇದು ಅತ್ಯಗತ್ಯ ಹೆಜ್ಜೆಯಾಗಿದೆ" ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರಂಭಿಕ ಕರಡು ಮಸೂದೆಯಲ್ಲಿ ಸಲಿಂಗ ಕಾಮಕ್ಕೆ ಮರಣದಂಡನೆ ವಿಧಿಸಲು ಪ್ರಸ್ತಾಪಿಸಲಾಗಿತ್ತು, ಆದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ರಾಷ್ಟ್ರಗಳ ಬಲವಾದ ವಿರೋಧದ ನಂತರ ಅಂಗೀಕರಿಸುವ ಮೊದಲು ಅದನ್ನು ತಿದ್ದುಪಡಿ ಮಾಡಲಾಯಿತು ಎಂದು ಇರಾಕ್ನ ಸ್ವತಂತ್ರ ಪೋರ್ಟಲ್ ಅಲ್ ಸುಮಾರಿಯಾ ನ್ಯೂಸ್ ವರದಿ ಮಾಡಿದೆ. ಈ ಹಿಂದೆ ಇರಾಕ್ ನಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿರಲಿಲ್ಲ.