ಕರ್ನಾಟಕ

karnataka

ETV Bharat / international

ಇಸ್ರೇಲ್​ನಿಂದ ಭೀಕರ ಕ್ಷಿಪಣಿ ದಾಳಿ: ವಿಮಾನ ಸೇವೆ ಸಂಪೂರ್ಣ ನಿಲ್ಲಿಸಿದ ಇರಾನ್​

ಇರಾನ್​​ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್​ ಕೂಡ ದಾಳಿ ನಡೆಸಿದೆ. ಇದರಿಂದ ಇರಾನ್​ ಸರ್ಕಾರ ತನ್ನ ವಿಮಾನ ಸೇವೆಯನ್ನ ರದ್ದು ಮಾಡಿದೆ.

ವಿಮಾನ ಸೇವೆ ಸಂಪೂರ್ಣ ನಿಲ್ಲಿಸಿದ ಇರಾನ್​
ವಿಮಾನ ಸೇವೆ ಸಂಪೂರ್ಣ ನಿಲ್ಲಿಸಿದ ಇರಾನ್​ (ANI)

By ANI

Published : Oct 26, 2024, 4:02 PM IST

ಟೆಹ್ರಾನ್ (ಇರಾನ್):ಇರಾನ್​ ದಾಳಿಗೆ ಪ್ರತಿಯಾಗಿ ಇಸ್ರೇಲ್​​ ಕ್ಷಿಪಣಿ ದಾಳಿ ಆರಂಭಿಸಿದ್ದು, ಭದ್ರತೆಯ ದೃಷ್ಟಿಯಿಂದ ಇರಾನ್​ ತನ್ನ ಎಲ್ಲ ವಿಮಾನ ಸಂಚಾರವನ್ನು ಭಾನುವಾರದಿಂದ ಸ್ಥಗಿತಗೊಳಿಸಿದೆ.

ಇಸ್ರೇಲ್​ ಭದ್ರತಾ ಪಡೆಗಳು ಬಾಂಬ್​ ದಾಳಿ ಆರಂಭಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಇದರಿಂದ ಮುಂದಿನ ಆದೇಶದವರೆಗೆ ಎಲ್ಲಾ ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರ ಜಾಫರ್ ಯಾಜೆರ್ಲೌ ತಿಳಿಸಿದ್ದಾರೆ.

ಟೆಹ್ರಾನ್, ಖುಜೆಸ್ತಾನ್ ಮತ್ತು ಇಲಾಮ್ ಪ್ರಾಂತ್ಯಗಳಲ್ಲಿನ ಹಲವೆಡೆ ಇಸ್ರೇಲ್​ ದಾಳಿ ಮಾಡಿದೆ ಎಂದು ಇರಾನ್‌ನ ವಾಯು ರಕ್ಷಣಾ ಪಡೆ ಹೇಳಿದೆ. ಕ್ಷಿಪಣಿ ದಾಳಿಯನ್ನು ಆಕ್ರಮಣವನ್ನು ಯಶಸ್ವಿಯಾಗಿ ತಡೆಯಲಾಗಿದೆ. ಸ್ಫೋಟದಿಂದಾಗಿ ಕೆಲವು ಸ್ಥಳಗಳಲ್ಲಿ ಹಾನಿಯುಂಟಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇರಾನ್​ ಸೇನೆ ತಿಳಿಸಿದೆ.

ಇಸ್ರೇಲ್​ ಆಕ್ರಮಣಕ್ಕೆ ಪ್ರತಿಕ್ರಿಯಾಗಿ ಇರಾನ್ ಮತ್ತೆ ದಾಳಿ ನಡೆಸಲಿದೆ. ಯಾವುದೇ ರೀತಿಯ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ಇರಾನ್ ಕೂಡ ಹಕ್ಕು ಹೊಂದಿದೆ. ಇಸ್ರೇಲ್​​ನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂಬುದರಲ್ಲಿ ಸಂದೇಹವಿಲ್ಲ ಎಂದು ಸೇನೆ ತಿಳಿಸಿದೆ.

ನಿಖರ ದಾಳಿ ಯಶಸ್ವಿ:ಇನ್ನೂ, ಇರಾನ್​ ಮೇಲಿನ ದಾಳಿಯನ್ನು ಇಸ್ರೇಲ್​ ದೃಢಪಡಿಸಿದೆ. ಅದರ ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಸೇನೆಯು, ಇಸ್ರೇಲ್ ತನ್ನ ಉದ್ದೇಶಗಳನ್ನು ಸಾಧಿಸಿದೆ. ಇಸ್ರೇಲ್​​ಗೆ ಬೆದರಿಕೆ ಹಾಕುವ ಯಾವುದೇ ರಾಷ್ಟ್ರಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಚ್ಚರಿಕೆ ನೀಡಿದೆ.

ಇಸ್ರೇಲ್ ಭದ್ರತಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, "ಇರಾನ್​ನ ನಿಗದಿತ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಇದಕ್ಕೆ ಇರಾನ್ ಪ್ರತಿಕ್ರಿಯಿಸಿ ದಾಳಿ ನಡೆಸಿದರೆ, ಮತ್ತೆ ಪ್ರತಿದಾಳಿ ನಡೆಸುತ್ತೇವೆ. ನಮ್ಮ ಸೇನೆಯು ಸಮರ್ಥ ದಾಳಿಯ ಸಾಮರ್ಥ್ಯ ಮತ್ತು ಸಂಕಲ್ಪ ಹೊಂದಿದೆ. ಇಸ್ರೇಲ್ ಮತ್ತು ಅದರ ನಾಗರಿಕರನ್ನು ರಕ್ಷಿಸಲು ಎಂಥದ್ದೇ ಸವಾಲಿಗೆ ಸಿದ್ಧ" ಎಂದು ಗುಡುಗಿದ್ದಾರೆ.

ಇಸ್ರೇಲ್ ವಿದೇಶಾಂಗ ಸಚಿವಾಲಯವೂ ತನ್ನ ಎಕ್ಸ್‌ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, "ಇರಾನ್​​ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ನಾವೂ ಮರು ದಾಳಿ ಮಾಡಿದ್ದೇವೆ. ನಮ್ಮ ವಿಮಾನಗಳು ಇರಾನ್​ ಮೇಲೆ ಬಾಂಬ್ ಸುರಿಸಿ ವಾಪಸ್​ ಬಂದಿವೆ. ನಮ್ಮ ಉದ್ದೇಶ ಈಡೇರಿದೆ" ಎಂದಿದೆ.

ಗಾಜಾಪಟ್ಟಿಯಲ್ಲಿ ಹಮಾಸ್​​ ಉಗ್ರರ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್​ ಮೇಲೆ ಇರಾನ್​ ಅಕ್ಟೋಬರ್​​ 1 ರಂದು ಭೀಕರ ಕ್ಷಿಪಣಿ ದಾಳಿ ನಡೆಸಿತ್ತು. 500 ಕ್ಕೂ ಅಧಿಕ ಕ್ಷಿಪಣಿಗಳನ್ನು ಏಕಕಾಲದಲ್ಲಿ ಉಡಾಯಿಸಿತ್ತು. ಇದನ್ನು ಇಸ್ರೇನ್​ ಐರನ್​ಡೋಮ್​ ತಡೆದರೂ ಕೆಲವು ಕ್ಷಿಪಣಿಗಳು ಇಸ್ರೇಲ್​ ನೆಲದ ಮೇಲೆ ಬಿದ್ದು ಹಾನಿ ಉಂಟು ಮಾಡಿದ್ದವು.

ಇದನ್ನೂ ಓದಿ:ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ: ಇರಾನ್​​ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್​ ದಾಳಿ

ABOUT THE AUTHOR

...view details