ಟೊರೊಂಟೊ, ಕೆನಡಾ:ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್ ಸಿಖ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬಳಿಕ ಭಾರತೀಯ ರಾಜತಾಂತ್ರಿಕರಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಶುಕ್ರವಾರ ಹೇಳಿದ್ದಾರೆ.
ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಜೋಲಿ ಇದೇ ವೇಳೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಭಾರತ ಕಳೆದ ಸೋಮವಾರ ಕೆನಡಾದ ಆರು ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಬಂಧ ಒಟ್ಟಾವಾದ ಆರೋಪಗಳನ್ನು ತಳ್ಳಿಹಾಕಿದ ಭಾರತ ಸರ್ಕಾರ, ಕೆನಡಾದಲ್ಲಿನ ತನ್ನ ಹೈಕಮಿಷನರ್ ಅನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಕೆನಡಾ ಸಹ ಆರು ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿದೆ.
ಭಾರತವನ್ನು ರಷ್ಯಾಕ್ಕೆ ಹೋಲಿಸಿರುವ ಕೆನಡಾ ವಿದೇಶಾಂಗ ಸಚಿವರಾದ ಜೋಲಿ, ಭಾರತೀಯ ರಾಜತಾಂತ್ರಿಕರು ಕೆನಡಾದಲ್ಲಿ ನರಹತ್ಯೆಗಳು, ಕೊಲೆ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಇತಿಹಾಸದಲ್ಲಿ ನಾವು ಇಂತಹದ್ದನ್ನು ನೋಡಿಲ್ಲ. ಕೆನಡಾದ ನೆಲದಲ್ಲಿ ಆ ಮಟ್ಟದ ಅಂತರಾಷ್ಟ್ರೀಯ ದಮನ ನಡೆಯಲು ನಾವು ಬಿಡುವುದಿಲ್ಲ. ನಾವು ಯುರೋಪಿನ ಬೇರೆಡೆ ನೋಡಿದ್ದೇವೆ, ಜರ್ಮನಿ ಮತ್ತು ಯುಕೆಯಲ್ಲಿ ರಷ್ಯಾ ಇಂತಹದ್ದನ್ನು ಮಾಡಿದೆ ಮತ್ತು ನಾವು ಈ ವಿಷಯದಲ್ಲಿ ದೃಢವಾಗಿ ನಿಲ್ಲುವ ಅಗತ್ಯವಿದೆ ಎಂದು ಜೋಲಿ ಹೇಳಿದ್ದಾರೆ.