ಬ್ರಾಂಪ್ಟನ್ (ಕೆನಡಾ):ಕೆನಡಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಟೊರೊಂಟೊ ನಗರದ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಈ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ರಾಜೀವ್ ವಾರಿಕೂ (51), ಇವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಪುತ್ರಿ ಮಾಹೆಕ್ ವಾರಿಕೂ (16) ಎಂದು ಗುರುತಿಸಲಾಗಿದೆ.
'ಈಟಿವಿ ಭಾರತ್'ಗೆ ಲಭ್ಯವಾದ ಮೂಲಗಳ ಪ್ರಕಾರ, ಟೊರೊಂಟೊದ ಬ್ರಾಂಪ್ಟನ್‌ನಲ್ಲಿ ರಾಜೀವ್ ವಾರಿಕೂ ಕುಟುಂಬ ವಾಸವಾಗಿತ್ತು. ಮಾರ್ಚ್ 7ರಂದು ತಮ್ಮ ಮನೆಯಲ್ಲಿ ಮೂವರು ಮೃತದೇಹಗಳು ಪತ್ತೆಯಾಗಿವೆ. ಅಂದು ಮಧ್ಯಾಹ್ನ 1:30ರ ಸುಮಾರಿಗೆ ಮನೆಯಲ್ಲಿ ಬೆಂಕಿ ಅವಘಡದ ಬಗ್ಗೆ ಅಗ್ನಿ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮನೆಯೊಳಗೆ ಮೂವರ ಅವಶೇಷಗಳು ದೊರೆತಿವೆ.
ಈ ಘಟನೆ ಬಗ್ಗೆ ಪೀಲ್ ಪ್ರಾದೇಶಿಕ ಪೊಲೀಸರು ಇಂದು (ಮಾರ್ಚ್ 15) ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತನಿಖಾಧಿಕಾರಿಯೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಿ ಮೃತರನ್ನು ಗುರುತಿಸಲಾಗಿದೆ. ರಾಜೀವ್ ವಾರಿಕೂ ಕಾಶ್ಮೀರಿ ಪಂಡಿತ್ ಆಗಿದ್ದರು. ಒಂಟಾರಿಯೊ ಆರೋಗ್ಯ ಸಚಿವಾಲಯದ ವ್ಯಾಪಾರ ಸೇವೆಗಳ ಶಾಖೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಬೆಂಕಿ ಅವಘಡ ಹೇಗೆ ಸಂಭವಿಸಿತ್ತು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.