ನ್ಯೂಯಾರ್ಕ್: ಭಾರತವು ತನ್ನದೇ ಆದ ಸ್ವತಂತ್ರ ನಿಲುವು, ಹಿತಾಸಕ್ತಿಗಳನ್ನು ಹೊಂದಿರುವ ಮಹಾನ್ ಶಕ್ತಿಯಾಗಿರುವುದರಿಂದ ಅದು ಯಾವತ್ತಿಗೂ ಅಮೆರಿಕದ ಔಪಚಾರಿಕ ಮಿತ್ರ ಅಥವಾ ಪಾಲುದಾರನಾಗಲು ಸಾಧ್ಯವಿಲ್ಲ, ಆದರೆ, ಎರಡೂ ದೇಶಗಳು ಜಾಗತಿಕ ವೇದಿಕೆಯಲ್ಲಿ ಮಿತ್ರರಾಷ್ಟ್ರಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ ಕರ್ಟ್ ಕ್ಯಾಂಪ್ ಬೆಲ್ ಹೇಳಿದ್ದಾರೆ.
ಭಾರತವು ಅಮೆರಿಕದ ಔಪಚಾರಿಕ ಮಿತ್ರರಾಷ್ಟ್ರ ಆಗದಿರುವುದು ಜಾಗತಿಕ ವೇದಿಕೆಯಲ್ಲಿ ಮಿತ್ರರಾಷ್ಟ್ರಗಳಾಗಿ ನಾವು ಬಲವಾದ ಸಂಬಂಧಗಳನ್ನು ಹೊಂದಲು ಸಾಧ್ಯವಿಲ್ಲ ಎಂದರ್ಥವಲ್ಲ ಎಂದು ಅವರು ಮಂಗಳವಾರ ವಾಷಿಂಗ್ಟನ್ನಲ್ಲಿ ನಡೆದ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯ ವಿಚಾರಣೆಯಲ್ಲಿ ಹೇಳಿದರು.
"ನಾವು ಭಾರತದ ನಿಲುವುಗಳನ್ನು ನಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಪರಿಣಾಮಾತ್ಮಕ ಪರಿವರ್ತಿಸಿದ್ದೇವೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು. ಭಾರತದೊಂದಿಗೆ ಸಂಬಂಧಗಳನ್ನು ಸರಿ ಮಾಡಿಕೊಳ್ಳುವುದು ಬಹುಶಃ ಅಮೆರಿಕದ ಪಾಲಿಗೆ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು.
ಭಾರತವು ತನ್ನ ಹಿತಾಸಕ್ತಿಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ ಮತ್ತು ಔಪಚಾರಿಕ ಒಪ್ಪಂದಗಳನ್ನು ಮಾಡಿಕೊಳ್ಳದೆಯೇ ತನ್ನ ಉದ್ದೇಶಗಳ ಸಾಧನೆಗಾಗಿ ಮೈತ್ರಿಗಳನ್ನು ಹೊಂದಿದೆ ಎಂಬ ಕ್ಯಾಂಪ್ ಬೆಲ್ ಅವರ ಹೇಳಿಕೆಯು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಸ್ವಾಯತ್ತ ಕಾರ್ಯತಂತ್ರದ ವಿದೇಶಾಂಗ ನೀತಿಗೆ ಅನುಗುಣವಾಗಿದೆ.
ಇತ್ತೀಚಿನ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಪ್ಪಿಕೊಳ್ಳುವ ಚಿತ್ರಗಳು ವಿಶ್ವದ ಪ್ರಮುಖ ವೃತ್ತಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಗಿರುವುದು ಅಮೆರಿಕದ ಪಾಲಿಗೆ ನುಂಗಲಾಗದ ಕಹಿ ಮಾತ್ರೆ ಎಂದು ರಿಪಬ್ಲಿಕನ್ ಸೆನೆಟರ್ ಜೇಮ್ಸ್ ರಿಶ್ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯ ವಿಚಾರಣೆಯಲ್ಲಿ ಹೇಳಿದರು.
ಭಾರತವು ಅಮೆರಿಕದ ಪಾಲಿಗೆ ಅತಿ ಪ್ರಮುಖ ದೇಶವಾಗಿದೆ ಮತ್ತು ಇದರ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದ ಕ್ಯಾಂಪ್ ಬೆಲ್, ರಷ್ಯಾದ ಭೌಗೋಳಿಕ ವಾಸ್ತವತೆಗಳು ಮತ್ತು ಐತಿಹಾಸಿಕ ಸಂಪರ್ಕಗಳ ಬಗ್ಗೆ ಪ್ರಸ್ತಾಪಿಸಿದರು. "ಭಾರತವು ಉಕ್ರೇನ್ ಮತ್ತು ರಷ್ಯಾ ಯುದ್ಧದ ವಿಷಯದಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಭಾರತವು ಜಾಗತಿಕವಾಗಿ ಜವಾಬ್ದಾರಿಯುತ ಪಾತ್ರವನ್ನು ವಹಿಸಲು ಬಯಸುತ್ತದೆ ಎಂದು ನಾನು ಭಾವಿಸುತ್ತೇನೆ." ಎಂದು ಅವರು ನುಡಿದರು.
"ಭಾರತವು ಸಹ ಒಂದು ಮಹಾನ್ ಶಕ್ತಿಯಾಗಿದೆ ಮತ್ತು ಅದು ತನ್ನದೇ ಆದ ನಂಬಿಕೆ, ತನ್ನದೇ ಆದ ಹಿತಾಸಕ್ತಿಗಳನ್ನು ಹೊಂದಿದೆ. ಜಾಗತಿಕ ದಕ್ಷಿಣದಲ್ಲಿ ಅಂಥ ಸಾಮರ್ಥ್ಯ ಹೊಂದಿರುವ ಕೆಲವೇ ದೇಶಗಳಿವೆ ಮತ್ತು ನಾವು ಅವರೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಚೀನಾದ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ವಿಷಯದಲ್ಲಿ ಯುಎಸ್ಗೆ ಭಾರತದ ಕಾರ್ಯತಂತ್ರದ ಅಗತ್ಯತೆಯ ಬಗ್ಗೆ ಹೇಳಿದರು.
ಇದನ್ನೂ ಓದಿ : ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ - Hamas Leader Ismail Haniyeh Killed