ನವದೆಹಲಿ:ಭಾರತದ ವಿರುದ್ಧ ಕೆನಡಾ ಒಂದಲ್ಲೊಂದು ರೀತಿಯಲ್ಲಿ ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ಗೆ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ಇದು ಭಾರತವನ್ನು ಕೆರಳಿಸಿದೆ. ಇದಕ್ಕುತ್ತರವಾಗಿ, 1985ರಲ್ಲಿ ಖಲಿಸ್ತಾನಿ ಉಗ್ರರು ನಡೆಸಿದ್ದ ಬಾಂಬ್ ದಾಳಿಯಲ್ಲಿ ಏರ್ ಇಂಡಿಯಾ ವಿಮಾನ ಸ್ಫೋಟಗೊಂಡು 329 ಪ್ರಯಾಣಿಕರು ಸಾವನ್ನಪ್ಪಿರುವುದಕ್ಕೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿದೆ.
ಜೂನ್ 23ರಂದು ದುರಂತ ನಡೆದು 39 ವರ್ಷ ಸಂದಿಸಲಿದೆ. ಸ್ಫೋಟದಲ್ಲಿ ಮಕ್ಕಳು ಸೇರಿದಂತೆ ನೂರಾರು ಜನರ ಸಾವಿಗೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರು ಕಾರಣವಾಗಿದ್ದರು. ಇದರ ಸಂತಾಪ ಸಭೆಯನ್ನು ಭಾರತದ ರಾಯಭಾರಿ ಕಚೇರಿ ನಡೆಸಲಿದೆ. ಈ ಮೂಲಕ ಕೆನಡಾಗೆ ಭಾರತ ಖಡಕ್ ತಿರುಗೇಟು ನೀಡಲು ಮುಂದಾಗಿದೆ.
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಜೂನ್ 18, 2023ರಂದು ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಅಪರಿಚಿತ ಗುಂಪು ಹತ್ಯೆ ಮಾಡಿತ್ತು. ಈ ಘಟನೆಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರುಡೊ ಆರೋಪಿಸಿದ್ದರು. ಇದು ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿತ್ತು. ಟ್ರುಡೊ ಆರೋಪವನ್ನು ಭಾರತ ನಿರಾಕರಿಸಿದೆ. ಇದಕ್ಕೆ ಪುರಾವೆಗಳನ್ನು ಸಲ್ಲಿಸಲು ಸೂಚಿಸಿದೆ.
ಇದಾದ ಬಳಿಕ, ಘಟನೆಯ ತನಿಖೆ ಆರಂಭಿಸಿದ ಕೆನಡಾ ಸರ್ಕಾರ ನಾಲ್ವರು ಭಾರತೀಯರನ್ನು ಬಂಧಿಸಿದೆ. ಇದೀಗ, ನಿಜ್ಜರ್ ಸಾವಿಗೆ ದೇಶದ ಸಂಸತ್ತಿನಲ್ಲೇ ವಿಶೇಷ ಗೌರವ ಸಲ್ಲಿಸಿದೆ. ಎಲ್ಲ ಸಂಸದರು ಎದ್ದು ನಿಂತು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತದಿಂದ ಕೌಂಟರ್ ಅಟ್ಯಾಕ್:ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, 1985ರಲ್ಲಿ ಏರ್ ಇಂಡಿಯಾ ಕಾನಿಷ್ಕ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಯಲ್ಲಿ ಮಡಿದ 329 ಜನರಿಗೆ ಜೂನ್ 23ರಂದು ಶ್ರದ್ಧಾಂಜಲಿ ಸಲ್ಲಿಸಲಿದೆ. ಕೆನಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ತಿಳಿಸಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತ ಯಾವಾಗಲೂ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏರ್ ಇಂಡಿಯಾ ಸ್ಫೋಟದ ಕಹಿನೆನಪು:1985ರಲ್ಲಿ ಏರ್ ಇಂಡಿಯಾ ಕಾನಿಷ್ಕ ವಿಮಾನವನ್ನು ಕೆನಡಾ ಮೂಲದ ಖಲಿಸ್ತಾನಿ ಉಗ್ರರು ದಾಳಿ ಮಾಡಿ ಸ್ಫೋಟಿಸಿದ್ದರು. 86 ಮಕ್ಕಳು ಸೇರಿದಂತೆ 329 ಜನರು ಪ್ರಾಣ ಕಳೆದುಕೊಂಡಿದ್ದರು. ವಿಮಾನ ಕೆನಡಾದಿಂದ ಲಂಡನ್‌ಗೆ ತೆರಳುತ್ತಿತ್ತು. 31 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಖಲಿಸ್ತಾನಿ ಭಯೋತ್ಪಾದಕ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತ್ತು. ಮೃತರಲ್ಲಿ 268 ಕೆನಡಾ ನಾಗರಿಕರು, 27 ಇಂಗ್ಲೆಂಡ್ ಮತ್ತು 24 ಭಾರತೀಯ ನಾಗರಿಕರು ಇದ್ದರು.
ಇದನ್ನೂ ಓದಿ:ಈ ಕ್ಷೇತ್ರದಲ್ಲಿ ಯುವಜನತೆಗೆ ಭಾರೀ ಬೇಡಿಕೆ: 1 ಮಿಲಿಯನ್ ಉದ್ಯೋಗ ಸೃಷ್ಟಿ ಎಂದ ತಜ್ಞರು - Hospitality Industry