ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿರಾರು ಬೆಂಬಲಿಗರು ಮಂಗಳವಾರ ಇಸ್ಲಾಮಾಬಾದ್ನಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ರಾಜಧಾನಿಯ ಎಲ್ಲೆಡೆ ಹಾಕಲಾಗಿರುವ ಶಿಪ್ಪಿಂಗ್ ಕಂಟೇನರ್ ಬ್ಯಾರಿಕೇಡ್ಗಳನ್ನು ಮುರಿದು ಹಾಕಿದ್ದಾರೆ. ಕಂಡಲ್ಲಿ ಗುಂಡಿಕ್ಕಲಾಗುವುದು ಎಂಬ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಪ್ರತಿಭಟನಾಕಾರರು ಖಾನ್ ಬಿಡುಗಡೆಗೆ ಒತ್ತಾಯಿಸಿ ತಮ್ಮ ಮೆರವಣಿಗೆಯನ್ನು ಮುಂದುವರೆಸಿದ್ದಾರೆ.
ಏತನ್ಮಧ್ಯೆ, ಪ್ರತಿಭಟನಾಕಾರರ ದಾಳಿಯಲ್ಲಿ ಕನಿಷ್ಠ ಆರು ಜನ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸಂವಿಧಾನದ 245 ನೇ ವಿಧಿಯ ಅಡಿ ಭದ್ರತೆಗಾಗಿ ಸೈನ್ಯ ಕರೆಯಲಾಗಿದೆ ಎಂದು ದೇಶದ ಆಂತರಿಕ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ತೀವ್ರಗೊಂಡ ಹಿಂಸಾತ್ಮಕ ಘರ್ಷಣೆ:ಪಿಟಿಐ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಲ್ಲಿ ಇಲ್ಲಿಯವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ನಾಲ್ವರು ಪಾಕಿಸ್ತಾನಿ ರೇಂಜರ್ಗಳು ಸೇರಿದಂತೆ ಕನಿಷ್ಠ ಆರು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್-ಶ್ರೀನಗರ ಹೆದ್ದಾರಿಯಲ್ಲಿ ಪಿಟಿಐ ಪ್ರತಿಭಟನಾಕಾರರ ವಾಹನವನ್ನು ರೇಂಜರ್ಸ್ಗಳಿಗೆ ಡಿಕ್ಕಿ ಹೊಡೆಸಲಾಗಿದೆ. ಇಸ್ಲಾಮಾಬಾದ್ನ ಚುಂಗಿ ಸಂಖ್ಯೆ 26 ರಲ್ಲಿ ಹಿಂಸಾತ್ಮಕ ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರೇಂಜರ್ ಗಾಯಗೊಂಡಿದ್ದಾರೆ.
ಹೊಸ ಅಧಿಸೂಚನೆಯ ಪ್ರಕಾರ, ಅಗತ್ಯ ಬಿದ್ದರೆ ಗಲಭೆಕೋರರ ಮೇಲೆ ಗುಂಡು ಹಾರಿಸುವುದಕ್ಕೆ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಪಾಕಿಸ್ತಾನ ಆಂತರಿಕ ಸಚಿವಾಲಯ ಹೊರಡಿಸಿದ ಈ ಅಧಿಸೂಚನೆಯ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸೂಕ್ತವೆಂದು ಭಾವಿಸಿದಾಗ ಸೈನ್ಯವು ಕರ್ಫ್ಯೂ ವಿಧಿಸಬಹುದಾಗಿದೆ. ಏತನ್ಮಧ್ಯೆ, ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಪ್ರತಿಭಟನಾ ಸ್ಥಳವನ್ನು ಬದಲಾಯಿಸಲು ನಿರಾಕರಿಸಿದ್ದಾರೆ.
ಪಿಟಿಐ ನಿಯೋಗವು ತಮ್ಮ ಸಂಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಡಿಯಾಲಾ ಜೈಲಿನಲ್ಲಿ ಕನಿಷ್ಠ ಎರಡು ಬಾರಿ ಭೇಟಿ ಮಾಡಿ, ಸರ್ಕಾರದೊಂದಿಗಿನ ಹಿಂಬಾಗಿಲ ಮಾತುಕತೆಗಳ ಬಗ್ಗೆ ಸಮಾಲೋಚಿಸಿದೆ. ಮೂಲಗಳ ಪ್ರಕಾರ, ಪಿಟಿಐ ಪ್ರತಿಭಟನೆಗಾಗಿ ಅತ್ಯಂತ ಸೂಕ್ಷ್ಮ ಡಿ-ಚೌಕ್ ಬದಲಿಗೆ ಸಂಜಾನಿ ಇಂಟರ್ ಚೇಂಜ್ ಸ್ಥಳವನ್ನು ಸರ್ಕಾರ ನೀಡಿದೆ ಎಂದು ಖಾನ್ಗೆ ತಿಳಿಸಲಾಗಿದೆ.
ಏನೇ ಆದರೂ ಡಿ-ಚೌಕ್ನಲ್ಲೇ ಪ್ರತಿಭಟನೆ - ಬುಶ್ರಾ ಬೀಬಿ :ಸಂಜಾನಿ ಇಂಟರ್ಚೇಂಜ್ ಸ್ಥಳವನ್ನು ಖಾನ್ ಒಪ್ಪಿಕೊಂಡಿದ್ದು, ಈ ಪ್ರಸ್ತಾಪವನ್ನು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಅವರಿಗೆ ತಿಳಿಸಿದ್ದಾರೆ. ಆದರೆ, ಬುಶ್ರಾ ಬೀಬಿ ಮಾತ್ರ ಇದಕ್ಕೆ ಒಪ್ಪದೇ ಏನೇ ಆದರೂ ಡಿ-ಚೌಕ್ನಲ್ಲೇ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಟಿಐ ಪ್ರತಿಭಟನಾಕಾರರು ಡಿ-ಚೌಕ್ ಕಡೆಗೆ ಮೆರವಣಿಗೆ ಮುಂದುವರಿಸಿದ್ದು, ರಾಜಧಾನಿಯಲ್ಲಿ ಭದ್ರತಾ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಪ್ರತಿಭಟನಾಕಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಈಗ ಪಾಕಿಸ್ತಾನ ಸೇನೆಯನ್ನು ಕರೆಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದಾಗಿದೆ.
ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡ ಚಿನ್ಮಯ್ ಕೃಷ್ಣ ದಾಸ್ ಬಂಧನ: ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ