ಬೆಳಗಾವಿ: ''ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಪಂಚನಾಮೆ ಮಾಡಬೇಕೆಂದರೆ, ಅದು ಯಾವ ರೀತಿಯಲ್ಲಿ ಎನ್ನುವುದನ್ನು ಸಿಐಡಿ ಹೇಳಲಿ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ'' ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುವರ್ಣ ವಿಧಾನಸೌಧದ ವಿಧಾನ ಪರಿಷತ್ ಮೊಗಸಾಲೆಯಲ್ಲಿ ಸಿಐಡಿ ತನಿಖೆಗೆ ಸ್ಥಳ ಮಹಜರಿಗೆ ಅನುಮತಿ ಕೊಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ''ಯಾವ ರೀತಿ ಸ್ಥಳ ಮಹಜರು ಮಾಡಲಾಗುತ್ತದೆ ಎಂಬುದನ್ನು ಸಿಐಡಿಯವರು ಹೇಳಬೇಕು. ಅಲ್ಲೇನು ಕುರ್ಚಿ ಅಥವಾ ಟೇಬಲ್ ಇರುವ ಸ್ಥಳ ಮಹಜರು ಮಾಡುತ್ತಾರೋ? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡುತ್ತಾರೋ? ಎನ್ನುವುದನ್ನು ತಿಳಿಸಬೇಕು. ಅಲ್ಲದೇ, ಸದನವನ್ನು ಮುಂದೂಡಲಾಗಿದೆ. ಸದನದೊಳಗೆ ಬಡಿದಾಟ, ಹೊಡೆದಾಟ ಆಗಿಲ್ಲ. ಅನುಮತಿ ಕೊಡಬೇಕೋ, ಕೊಡಬಾರದೋ ಎನ್ನುವುದನ್ನು ಈಗ ಹೇಳಲು ಆಗುವುದಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ'' ಎಂದು ಹೇಳಿದರು.
ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ಪತ್ರ ಬರೆದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ''ನಿನ್ನೆ ವಿಡಿಯೋ ಸಾಕ್ಷಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿದ್ದಾರೆ. ಮೊದಲು ಸಿ.ಟಿ.ರವಿ ಕೊಟ್ಟಿದ್ದರು. ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು. ಈಗ ಎರಡು ಕಡೆಯಿಂದ ವಿಡಿಯೋ ಬಂದಿವೆ. ನಮ್ಮ ಕಾರ್ಯದರ್ಶಿ ಜೊತೆಗೆ ನಮ್ಮದೇ ತಂಡಕ್ಕೆ ವಿಡಿಯೋ ಕೊಟ್ಟಿದ್ದೇನೆ. ನಾಳೆ ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡಿ ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ವರದಿ ಬಂದ ಬಳಿಕ ಸತ್ಯಾಂಶ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ಬಸವರಾಜ ಹೊರಟ್ಟಿ ಹೇಳಿದರು.
ಶೇ.99ರಷ್ಟು ಸಂಧಾನ ಆಗಲ್ಲ: ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಂಧಾನದ ತಮ್ಮ ಹೇಳಿಕೆಗೆ, ''ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧರಿಸಿದ್ದೇನೆ. ಈಗ ಇಬ್ಬರನ್ನು ನೋಡಿದರೆ ಸಂಧಾನ ಆಗುವ ರೀತಿ ಕಾಣಿಸುತ್ತಿಲ್ಲ. ಯಾಕೆಂದರೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆದರೂ ಇಬ್ಬರಿಗೂ ಫೋನ್ ಮಾಡಿ ಸಂಧಾನಕ್ಕೆ ಪ್ರಯತ್ನಿಸುವೆ. ಆದರೆ, ಶೇ.99ರಷ್ಟು ಸಂಧಾನ ಆಗಲ್ಲ'' ಎಂದು ಸಭಾಪತಿ ಬೇಸರ ಹೊರಹಾಕಿದರು.
ನಮಗೆ ವಿಡಿಯೋ, ಆಡಿಯೋ ಸಿಕ್ಕಿಲ್ಲ: ಸಿಐಡಿ ಅಧಿಕಾರಿಗಳು ಸೂಕ್ತ ಕಾರಣ ಕೊಟ್ಟರೆ ಮಹಜರಿಗೆ ಅವಕಾಶ ಕೊಡುತ್ತೀರಾ ಎಂಬ ಪ್ರಶ್ನೆಗೆ, ''ನಮಗೆ ಸಿಐಡಿ ಸೂಕ್ತ ಕಾರಣ ಕೊಡಲಿ. ಸದನ ಮುಂದೂಡಿದ್ದರಿಂದ ನಮ್ಮದೇ ಕ್ಯಾಮೆರಾ, ಆಡಿಯೋ, ವಿಡಿಯೋ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತವೆ. ಸದನ ಮುಂದೂಡಲಾಗಿದೆ ಎಂದು ಹೇಳಿ, ನಾನು ಒಂದು ಹೆಜ್ಜೆ ಮುಂದಿಟ್ಟರೂ ವಿಡಿಯೋ, ಆಡಿಯೋ ಬಂದ್ ಆಗಿರುತ್ತವೆ. ನಮಗೆ ಆ ವಿಡಿಯೋ, ಆಡಿಯೋ ಸಿಕ್ಕಿಲ್ಲ. ಮಾಧ್ಯಮಗಳು ಆಡಿಯೋ, ವಿಡಿಯೋ ಕೊಟ್ಟರೂ ಸಹ ಅದನ್ನು ಎಫ್ಎಸ್ಎಲ್ಗೆ ಕಳುಹಿಸುತ್ತೇನೆ'' ಎಂದರು.
ಹೆಬ್ಬಾಳ್ಕರ್ ದೂರು ಪರಿಶೀಲಿಸುವೆ: ''ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ಇಬ್ಬರೂ ಕೂಡ ಡಿ.19ರಂದು ದೂರು ಕೊಟ್ಟಿದ್ದರು. ಎರಡೂ ದೂರು ನೋಡಿ ಅವತ್ತೇ ನಾನು ತೀರ್ಮಾನ ಮಾಡಿದೆ, ಅಲ್ಲಿಗೆ ನನ್ನ ಪ್ರಕ್ರಿಯೆ ಮುಗಿತು ಎಂದು. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಸಿ.ಟಿ.ರವಿ ವಿರುದ್ಧ ದೂರು ನೀಡಿದ್ದಾರೆ. ಹೆಬ್ಬಾಳ್ಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲಿಸುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ, ಆಡಿಯೋ ನೋಡುತ್ತೇವೆ. ಎಫ್ಎಸ್ಎಲ್ಗೆ ಕಳುಹಿಸುವ ಹಾಗಿದ್ದರೆ ಕಳುಹಿಸುತ್ತೇವೆ. ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು'' ಎಂದು ಹೇಳಿದರು.
ಇದನ್ನೂ ಓದಿ: ಮನಪಾ ಆಯುಕ್ತರ ವಿರುದ್ಧ ಸಾಲು ಸಾಲು ಭಷ್ಟಾಚಾರದ ಆರೋಪ ; ಸರ್ಕಾರಕ್ಕೆ ಪತ್ರ ಬರೆಯುವೆ ಎಂದ ಮೇಯರ್
ಮತ್ತೊಮ್ಮೆ ಸಂಧಾನಕ್ಕೆ ಪ್ರಯತ್ನಿಸುತ್ತೀರಾ ಎಂಬುದಕ್ಕೆ, ''ನೋಡೋಣ ಪಕ್ಷ, ಪಕ್ಷಗಳ ನಡುವೆ ನಡೆದಿದೆ. ನಾನು ರವಿಯವರನ್ನು ಕೇಳಿದರೆ, ನಮ್ಮ ಅಧ್ಯಕ್ಷರನ್ನು ಕೇಳಿ ಅಂತಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಕೇಳಿದರೆ ಸಿಎಂಗೆ ಕೇಳಿ ಎನ್ನುತ್ತಾರೆ. ಹಾಗಾಗಿ, ಹೆಬ್ಬಾಳ್ಕರ್ ಒಬ್ಬರು ರಾಜಕಾರಣಿ, ಶಾಸಕಿ, ಮಂತ್ರಿ ಅಂತಾ ನಾನು ಪರಿಗಣಿಸುವುದಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ಒಬ್ಬರು ಹೆಣ್ಣು ಮಗಳಿಗೆ ಯಾರೂ ಏನೂ ಅನ್ನದೇ ಈ ರೀತಿ ದೂರು ಕೊಡಲು ಬರಲ್ಲ. ಅದರಲ್ಲಿ ಏನಿದೆ ಎಂಬುದನ್ನು ನೋಡುತ್ತೇವೆ. ಇತಿಹಾಸದಲ್ಲಿ ಇದೊಂದು ದಾಖಲೆ ಆಗುತ್ತದೆ. ಇಡೀ ಭಾರತ ದೇಶದ ಎಲ್ಲಾ ರಾಜ್ಯಗಳಿಗೂ ಈ ಸುದ್ದಿ ಹೋಗಿದೆ. ಹಾಗಾಗಿ, ಬಹಳ ಎಚ್ಚರಿಕೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ'' ಎಂದ ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಕೆಸರೆ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯನವರ ಹೆಸರಿಡಿ: ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ