ಟೆಲ್ ಅವೀವ್: ಫಿಲಡೆಲ್ಫಿ ಪ್ರದೇಶ ಎಂದು ಕರೆಯಲ್ಪಡುವ ಗಾಜಾ-ಈಜಿಪ್ಟ್ ಗಡಿಯುದ್ದಕ್ಕೂ ಹಬ್ಬಿರುವ ಸಂಪೂರ್ಣ ಮಾರ್ಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಈ ಪ್ರದೇಶದಲ್ಲಿ ಗಡಿಯಾಚೆಯವರೆಗೆ ಹರಡಿರುವ, ಕಳ್ಳಸಾಗಣೆಗೆ ಬಳಸಲಾಗುವ 20 ಸುರಂಗಗಳು ಪತ್ತೆಯಾಗಿವೆ ಎಂದು ಮಿಲಿಟರಿ ತಿಳಿಸಿದೆ.
ಈ ಬಗ್ಗೆ ಬುಧವಾರ ರಾತ್ರಿ ಮಾತನಾಡಿದ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಗಡಿಯಲ್ಲಿ ಹಲವಾರು ರಾಕೆಟ್ ಲಾಂಚರ್ಗಳು ಪತ್ತೆಯಾಗಿವೆ ಎಂದು ಹೇಳಿದರು. ಹೊಸದಾಗಿ ವಶಪಡಿಸಿಕೊಂಡ ಭೂಪ್ರದೇಶವು ಗಾಜಾ-ಈಜಿಪ್ಟ್ ಗಡಿಯುದ್ದಕ್ಕೂ 14 ಕಿ.ಮೀ ಉದ್ದವಿದೆ. ಹಮಾಸ್ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಈ ಪ್ರದೇಶ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದರು.
ಪತ್ತೆಯಾದ 20 ಸುರಂಗಗಳ ಪೈಕಿ ಕೆಲವುಗಳ ಇರುವಿಕೆ ಮೊದಲೇ ತಿಳಿದಿತ್ತು. ಆದರೆ ಇದರಲ್ಲಿ ತಿಳಿಯದ ಅನೇಕ ಹೊಸ ಸುರಂಗಗಳೂ ಪತ್ತೆಯಾಗಿವೆ. ಸುರಂಗಗಳಿಗೆ ಪ್ರವೇಶ ಕಲ್ಪಿಸುವ 82 ಸುರಂಗ ಶಾಫ್ಟ್ಗಳನ್ನು ಹೊಸದಾಗಿ ವಶಪಡಿಸಿಕೊಂಡ ಗಡಿ ಪ್ರದೇಶದಲ್ಲಿ ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ತನ್ನ ಪಡೆಗಳು ಕಾರಿಡಾರ್ನ ಹೆಚ್ಚಿನ ಭಾಗವನ್ನು ಭೌತಿಕವಾಗಿ ನಿಯಂತ್ರಿಸುತ್ತಿವೆ ಮತ್ತು ತೀರಾ ಸಣ್ಣ ಭಾಗವನ್ನು ವೈಮಾನಿಕ ಕಣ್ಗಾವಲಿನ ಮೂಲಕ ನಿಯಂತ್ರಿಸಲಾಗುತ್ತಿದೆ ಎಂದು ಐಡಿಎಫ್ ಹೇಳಿದೆ. ಈಜಿಪ್ಟ್ನ ಗಡಿಯೊಳಗೆ ಬೀಳಬಹುದೆಂಬ ಭಯದಿಂದ ಇಸ್ರೇಲ್ ಈ ದಿಕ್ಕಿನಲ್ಲಿ ರಾಕೆಟ್ ಹಾರಿಸಲಾರದು ಎಂದು ತಿಳಿದಿದ್ದ ಹಮಾಸ್ ಭಯೋತ್ಪಾದಕರು ಈಜಿಪ್ಟ್ ಗಡಿಯುದ್ದಕ್ಕೂ ರಾಕೆಟ್ ಲಾಂಚರ್ಗಳನ್ನು ನಿಯೋಜಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಹಮಾಸ್ ಫಿಲಡೆಲ್ಫಿ ಪ್ರದೇಶವನ್ನು ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ಬಳಸಿಕೊಂಡಿದೆ. ಈಜಿಪ್ಟ್ನ ಗಡಿಯಿಂದ ಕೆಲವೇ ಮೀಟರ್ಗಳ ದೂರದಲ್ಲಿ ಅದು ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಸ್ಥಾಪಿಸಿದೆ. ಇಲ್ಲಿ ನಾವು ದಾಳಿ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಹಮಾಸ್ಗೆ ತಿಳಿದಿದೆ" ಎಂದು ಹಗರಿ ಹೇಳಿದರು.
ಸಿರಿಯಾ ಮೇಲೆ ಇಸ್ರೇಲ್ ದಾಳಿ: ಸಿರಿಯಾದ ಕೇಂದ್ರ ಪ್ರಾಂತ್ಯವಾದ ಹೋಮ್ಸ್ನಲ್ಲಿನ ಹಿಜ್ಬುಲ್ಲಾ ಉಗ್ರರ ತಾಣಗಳ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇಸ್ರೇಲಿ ಕ್ಷಿಪಣಿಗಳು ಅಲ್-ಫುರ್ಕ್ಲುಸ್ ಪಟ್ಟಣದ ಬಳಿಯ ಕನಿಷ್ಠ ಒಂದು ಮಿಲಿಟರಿ ತಾಣದ ಮೇಲೆ ದಾಳಿ ನಡೆಸಿದ್ದು, ಸ್ಥಳದಿಂದ ದಟ್ಟವಾದ ಹೊಗೆ ಕಂಡು ಬಂದಿದೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ ಎಂದು ಬುಧವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ :ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಇಬ್ಬರು ಭಾರತೀಯ ಕೈದಿಗಳಿಗೆ ರಾಜತಾಂತ್ರಿಕರೊಂದಿಗೆ ಭೇಟಿಗೆ ಅವಕಾಶ - consular access to Indian prisoners