ಟೆಲ್ ಅವೀವ್: ಕಳೆದ ವರ್ಷ ಅಕ್ಟೋಬರ್ 7ರಂದು ಗಾಜಾ ಪಟ್ಟಿಯಿಂದ ಹಮಾಸ್ ದಾಳಿ ನಡೆಸುವ ಎರಡು ವಾರಗಳ ಮೊದಲೇ ಇಂಥದೊಂದು ದಾಳಿ ನಡೆಯಬಹುದು ಎಂದು ಇಸ್ರೇಲ್ ಮಿಲಿಟರಿ ಗುಪ್ತಚರ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿತ್ತು ಎಂದು ಇಸ್ರೇಲ್ ಸಾರ್ವಜನಿಕ ಪ್ರಸಾರ ಸಂಸ್ಥೆ ಕಾನ್ ತಿಳಿಸಿದೆ.
ಮಿಲಿಟರಿ ನೆಲೆಗಳು ಮತ್ತು ವಸಾಹತುಗಳ ಮೇಲೆ ದಾಳಿ ನಡೆಸುವ ಬಗ್ಗೆ ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 250 ಜನರನ್ನು ಒತ್ತೆಯಾಳುಗಳನ್ನಾಗಿ ಕರೆದುಕೊಂಡು ಹೋಗುವ ಯೋಜನೆಗಳನ್ನು ಹಮಾಸ್ ರೂಪಿಸಿದೆ ಎಂದು ಸೆಪ್ಟೆಂಬರ್ 19 ರಂದು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಗಾಜಾ ವಿಭಾಗದಲ್ಲಿ ವಿತರಿಸಲಾದ ದಾಖಲೆಯಲ್ಲಿ ವಿವರಿಸಲಾಗಿದೆ ಎಂದು ಕಾನ್ ವರದಿ ತಿಳಿಸಿದೆ.
ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿರುವ ಐಡಿಎಫ್ನ ಅತ್ಯುನ್ನತ ಘಟಕವಾದ 8200 ಈ ವರದಿ ತಯಾರಿಸಿತ್ತು. ಆದರೆ ಹಿರಿಯ ಅಧಿಕಾರಿಗಳು ಈ ವರದಿಯನ್ನು ನಿರ್ಲಕ್ಷಿಸಿದರು. ಹತ್ತಾರು ಹಮಾಸ್ ಉಗ್ರರು ಮಾತ್ರ ಇಸ್ರೇಲ್ ಪ್ರವೇಶಿಸಬಹುದು ಎಂದು ಅಧಿಕಾರಿಗಳು ಅಂದುಕೊಂಡಿದ್ದು ಇನ್ನೂ ದುರಂತಮಯವಾಗಿದೆ.
"ಆ ಸಮಯದಲ್ಲಿ ಭದ್ರತಾ ವ್ಯವಸ್ಥೆಯು ಪ್ಯಾಲೆಸ್ಟೈನ್ ನಾಗರಿಕರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ಯಾಲೆಸ್ಟೈನಿಯರಿಗೆ ಕೆಲಸದ ಪರವಾನಗಿಗಳನ್ನು ಮತ್ತು ಸರಕುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಗಾಜಾ ಪಟ್ಟಿಯ ಶಾಂತಿಗಾಗಿ ಕೆಲಸ ಮಾಡುತ್ತಿತ್ತು" ಎಂದು ಕಾನ್ ಮಿಲಿಟರಿ ವರದಿಗಾರರೊಬ್ಬರು ಹೇಳಿದರು.