ಟೆಲ್ ಅವೀವ್: 40 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಇಸ್ರೇಲ್ನ ಬೇಡಿಕೆಯನ್ನು ಹಮಾಸ್ ತಿರಸ್ಕರಿಸಿದ ನಂತರ ಕೈರೋದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಪರೋಕ್ಷ ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ ಉಂಟಾಗಿದೆ. ತನ್ನ ಬಳಿ 40 ಜನ ವೃದ್ಧ ಮತ್ತು ಮಹಿಳಾ ಒತ್ತೆಯಾಳುಗಳು ಇಲ್ಲ ಎಂದು ಹಮಾಸ್ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಆದರೆ, ಶಾಂತಿ ಮಾತುಕತೆಗಳು ಮುಂದುವರಿಯಬೇಕಾದರೆ ಹಮಾಸ್ ಕನಿಷ್ಠ 40 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲೇಬೇಕು ಎಂದು ಇಸ್ರೇಲ್ ಪಟ್ಟು ಹಿಡಿದಿದೆ.
ವೃದ್ಧ ಮತ್ತು ಮಹಿಳಾ ಒತ್ತೆಯಾಳುಗಳನ್ನು ಮಾತ್ರ ಸೇರಿಸಿ 40ರ ಸಂಖ್ಯೆ ತಲುಪುವುದು ಕಷ್ಟ. ಹೀಗಾಗಿ ಇದಕ್ಕೆ ಆರೋಗ್ಯವಂತ ಪುರುಷ ಒತ್ತೆಯಾಳುಗಳನ್ನು ಕೂಡ ಸೇರಿಸಬೇಕಾಗುತ್ತದೆ ಎಂದು ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ತಂಡವು ಕತಾರ್ ಮತ್ತು ಈಜಿಪ್ಟ್ ನಾಯಕರನ್ನೊಳಗೊಂಡ ಮಧ್ಯಸ್ಥಿಕೆದಾರರಿಗೆ ತಿಳಿಸಿದೆ.
ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಹಮಾಸ್ ನಾಯಕತ್ವದಲ್ಲಿ ಭಿನ್ನಮತ ಉಂಟಾಗಿದೆ. ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಹಮಾಸ್ನ ರಾಜಕೀಯ ಬ್ಯೂರೋ ತಕ್ಷಣದ ಕದನ ವಿರಾಮ ಬಯಸುತ್ತಿದ್ದರೆ, ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ನೇತೃತ್ವದ ಮಿಲಿಟರಿ ಬಣವು ಕಠಿಣ ಚೌಕಾಸಿ ನಡೆಸಿ ಗಾಜಾ ಪಟ್ಟಿಯಿಂದ ಇಸ್ರೇಲಿ ಸೈನ್ಯವು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಮಾಡಬೇಕೆಂದು ಬಯಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.