ಜೆರುಸಲೇಂ: ಪ್ಯಾಲೆಸ್ಟೈನ್ ದೇಶ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳ ಭಾಗವಾಗಿ ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ.
"ಪ್ರಧಾನಿ ನೆತನ್ಯಾಹು ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯಾಗದಂತೆ ಪ್ರಯತ್ನಿಸಿದ್ದಾರೆ ಹಾಗೂ ಮುಂದೆಯೂ ಅದೇ ಪ್ರಯತ್ನಗಳನ್ನು ಮುಂದುವರಿಸಲಿದ್ದಾರೆ" ಎಂದು ಅವರ ಕಚೇರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯು ಇಸ್ರೇಲ್ನ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಬಂಧಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪರಿಗಣನೆ: ಸೌದಿ ಅರೇಬಿಯಾದೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸಲು ನಡೆಯುತ್ತಿರುವ ಮಾತುಕತೆಗಳ ಭಾಗವಾಗಿ ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪನೆಯ ವಿಷಯವನ್ನು ಇಸ್ರೇಲ್ ಪರಿಗಣಿಸುತ್ತಿದೆ ಎಂದು ಇಸ್ರೇಲ್ ಮಾಧ್ಯಮಗಳು ಈ ಹಿಂದೆ ವರದಿ ಮಾಡಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿತ್ತು.
ಏತನ್ಮಧ್ಯೆ ಸೌದಿ ಕೂಡ ಈ ವರದಿಯನ್ನು ಬಲವಾಗಿ ನಿರಾಕರಿಸಿದ್ದು, ಈ ವಿಷಯದಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಹೇಳಿದೆ. "ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬ ತನ್ನ ನಿಲುವಿನಿಂದ ಸೌದಿ ಅರೇಬಿಯಾದ ನಾಯಕತ್ವವು ಹಿಂದೆ ಸರಿದಿದೆ ಎಂಬ ವರದಿಗಳು ಕೂಡ ಅಷ್ಟೇ ಆಧಾರರಹಿತವಾಗಿವೆ" ಎಂದು ಹೆಸರು ಹೇಳಲಿಚ್ಛಿಸದ ಸೌದಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಜಾಕ್ಕೆ ತನ್ನ ಸಹಾಯ ಮುಂದುವರೆಯುತ್ತೆ: "ಗಾಜಾದಲ್ಲಿನ ಯುದ್ಧ ಕೊನೆಗೊಳಿಸಲು ಮತ್ತು ಪ್ಯಾಲೆಸ್ಟೈನ್ ಜನರಿಗೆ ಸ್ವತಂತ್ರ ರಾಷ್ಟ್ರ ಸ್ಥಾಪಿಸಲು ಸಹಾಯ ಮಾಡುವುದನ್ನು ಸೌದಿ ಅರೇಬಿಯಾ ಮುಂದುವರಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್, ಪೂರ್ವ ಜೆರುಸಲೇಂ ಮತ್ತು ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. ಈ ಪ್ರದೇಶಗಳಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ಸ್ಥಾಪಿಸಬೇಕು ಎಂಬುದು ಪ್ಯಾಲೆಸ್ಟೈನಿಯರ ಬೇಡಿಕೆಯಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾದಂತಹ ಅರಬ್ ದೇಶಗಳು ಯುದ್ಧದ ನಂತರ ಗಾಜಾ ಆಡಳಿತದ ಮೇಲ್ವಿಚಾರಣೆ ವಹಿಸಿಕೊಳ್ಳಲಿ ಎಂಬ ಪ್ರಸ್ತಾಪವನ್ನು ನೆತನ್ಯಾಹು ಮುಂದಿಟ್ಟಿದ್ದಾರೆ. ಆದರೆ ಪ್ಯಾಲೆಸ್ಟೈನ್ ಪ್ರಾಧಿಕಾರದ ಪಾಲ್ಗೊಳ್ಳುವಿಕೆಯಿಲ್ಲದೆ ಗಾಜಾದ ಯುದ್ಧಾನಂತರದ ನಿರ್ವಹಣೆ ಅಥವಾ ಪುನರ್ ನಿರ್ಮಾಣದಲ್ಲಿ ಭಾಗವಹಿಸುವುದಿಲ್ಲ ಎಂದು ಆ ದೇಶಗಳು ಪದೇ ಪದೆ ಹೇಳಿವೆ. ಪ್ಯಾಲೆಸ್ಟೈನ್ ಪ್ರಾಧಿಕಾರ ಅಥವಾ ಅದೇ ರೀತಿಯ ಆಡಳಿತ ವ್ಯವಸ್ಥೆ ರಚಿಸಲು ಸಾಧ್ಯವಾಗದಿದ್ದರೆ ಗಾಜಾದಲ್ಲಿ ಮತ್ತೆ ಹಮಾಸ್ ಅಧಿಕಾರವನ್ನು ಕಬಳಿಸಬಹುದು ಎಂದು ಯುಎಸ್ ಮತ್ತು ಇಸ್ರೇಲ್ನ ಭದ್ರತಾ ಸಂಸ್ಥೆಗಳು ಎಚ್ಚರಿಸಿವೆ.
ಇದನ್ನೂ ಓದಿ : ಮೃತ ಉತ್ತರ ಕೊರಿಯಾ ಸೈನಿಕನ ಶವಕ್ಕೆ ಬೆಂಕಿ ಇಟ್ಟರಾ ರಷ್ಯಾ ಸೈನಿಕರು? ವೀಡಿಯೊ ಶೇರ್ ಮಾಡಿದ ಝೆಲೆನ್ ಸ್ಕಿ - RUSSIA UKRAINE WAR