ಕರ್ನಾಟಕ

karnataka

ETV Bharat / international

ಅನುಮತಿ ಪಡೆಯದೆ ಧಾರ್ಮಿಕ ಚಟುವಟಿಕೆ ಆರೋಪ: ಕತಾರ್​ನಲ್ಲಿ ಗುರು ಗ್ರಂಥ ಸಾಹಿಬ್ ವಶಕ್ಕೆ - Guru Granth Sahib - GURU GRANTH SAHIB

ಕತಾರ್​ನಲ್ಲಿ ಅಲ್ಲಿನ ಅಧಿಕಾರಿಗಳು ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ವಶಪಡಿಸಿಕೊಂಡಿದ್ದಾರೆ.

ಕತಾರ್​ನಲ್ಲಿನ ಸಿಖ್ ಸಮುದಾಯ
ಕತಾರ್​ನಲ್ಲಿನ ಸಿಖ್ ಸಮುದಾಯ (IANS)

By ETV Bharat Karnataka Team

Published : Aug 23, 2024, 4:48 PM IST

ನವದೆಹಲಿ:ಕತಾರ್​ನಲ್ಲಿನ ಸ್ಥಳೀಯ ಅಧಿಕಾರಿಗಳು ಗುರು ಗ್ರಂಥ ಸಾಹಿಬ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕತಾರ್ ಸರಕಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

"ಕತಾರ್ ಅಧಿಕಾರಿಗಳು ಗುರು ಗ್ರಂಥ ಸಾಹಿಬ್ ಅನ್ನು ವಶಪಡಿಸಿಕೊಂಡಿರುವುದು ಮತ್ತು ಗ್ರಂಥಗಳನ್ನು ಮರಳಿ ನೀಡುವಂತೆ ಅಲ್ಲಿನ ಸಿಖ್ ಸಮುದಾಯದವರ ಬೇಡಿಕೆಯ ಬಗೆಗಿನ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಭಾರತ ಸರ್ಕಾರವು ಈಗಾಗಲೇ ಈ ವಿಷಯವನ್ನು ಕತಾರ್ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದೆ ಮತ್ತು ನಮ್ಮ ರಾಯಭಾರ ಕಚೇರಿಯು ದೋಹಾದಲ್ಲಿನ ಸಿಖ್ ಸಮುದಾಯದವರಿಗೆ ಮಾಹಿತಿಯನ್ನು ಒದಗಿಸಿದೆ" ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗಳಿಗೆ ತಿಳಿಸಿದರು.

"ಕತಾರ್ ಸರ್ಕಾರದ ಅನುಮತಿ ಇಲ್ಲದೆ ಧಾರ್ಮಿಕ ಸಂಸ್ಥೆಯನ್ನು ನಡೆಸುತ್ತಿರುವ ಆರೋಪ ಹೊತ್ತಿರುವ ಎರಡು ವ್ಯಕ್ತಿಗಳು ಅಥವಾ ಗುಂಪುಗಳಿಂದ ಗುರು ಗ್ರಂಥ ಸಾಹಿಬ್​ನ ಎರಡು ಮಾದರಿಗಳನ್ನು ಕತಾರ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯದಲ್ಲಿ ನಮ್ಮ ರಾಯಭಾರ ಕಚೇರಿಯು ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತಿದೆ" ಎಂದು ಅವರು ಹೇಳಿದರು.

ಪವಿತ್ರ ಗುರು ಗ್ರಂಥ ಸಾಹಿಬ್​ನ ಒಂದು ಮಾದರಿ ಗ್ರಂಥವನ್ನು ಕತಾರ್ ಅಧಿಕಾರಿಗಳು ಈಗಾಗಲೇ ಹಿಂದಿರುಗಿಸಿದ್ದಾರೆ ಮತ್ತು ಇನ್ನೊಂದನ್ನು ಗೌರವದಿಂದ ಇರಿಸಿಕೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ ಎಂದು ಎಂಇಎ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

"ನಾವು ಈ ವಿಷಯವನ್ನು ಕತಾರ್ ಅಧಿಕಾರಿಗಳೊಂದಿಗೆ ಹೆಚ್ಚಿನ ಆದ್ಯತೆಯೊಂದಿಗೆ ಪ್ರಸ್ತಾಪಿಸಿದ್ದೇವೆ ಮತ್ತು ಶೀಘ್ರವೇ ಸಮಸ್ಯೆ ಪರಿಹಾರವಾಗುವ ಭರವಸೆಯಿದೆ" ಎಂದು ಜೈಸ್ವಾಲ್ ಹೇಳಿದರು.

ಕತಾರ್​ನಲ್ಲಿ ಪೊಲೀಸ್ ಕಸ್ಟಡಿಯಿಂದ ಶ್ರೀ ಗುರು ಗ್ರಂಥ ಸಾಹಿಬ್​ನ ಎರಡು ಮಾದರಿಯ ಗ್ರಂಥಗಳನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುವಂತೆ ಕೋರಿ ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿರುವುದಾಗಿ ಮಾಜಿ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಮತ್ತು ಬಟಿಂಡಾದ ಪ್ರಸ್ತುತ ಸಂಸದೆ ಹರ್ ಸಿಮ್ರತ್ ಕೌರ್ ಬಾದಲ್ ಶುಕ್ರವಾರ ಹೇಳಿದ್ದಾರೆ.

"ಸಮುದಾಯದಿಂದ ಜೀವಂತ ಗುರು ಎಂದು ಪರಿಗಣಿಸಲ್ಪಟ್ಟ ಶ್ರೀ ಗುರು ಗ್ರಂಥ ಸಾಹಿಬ್ ಜಿ ಗ್ರಂಥವನ್ನು ವಶಪಡಿಸಿಕೊಳ್ಳಲಾಗಿರುವುದರಿಂದ ಕತಾರ್​ನ ಸಿಖ್ ಸಮುದಾಯ ಆಘಾತಕ್ಕೊಳಗಾಗಿದೆ ಮತ್ತು ದುಃಖಿತವಾಗಿದೆ ಎಂದು ಸಚಿವ ಜೈಶಂಕರ್​ ಅವರಿಗೆ ತಿಳಿಸಲಾಗಿದೆ. ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಮತ್ತು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಣೆ ಮಾಡಿಕೊಳ್ಳಲು ಕತಾರ್​ನಲ್ಲಿ ಗುರುದ್ವಾರಗಳನ್ನು ಸ್ಥಾಪಿಸಲು ಸಿಖ್ಖರಿಗೆ ಅವಕಾಶ ನೀಡುವ ವಿಷಯವನ್ನು ಕತಾರ್​ ಸರ್ಕಾರದ ಮುಂದೆ ಪ್ರಸ್ತಾಪಿಸಬೇಕೆಂದು ಮನವಿ ಮಾಡಲಾಗಿದೆ" ಎಂದು ಬಾದಲ್ ಸಾಮಾಜಿಕ ಮಾಧ್ಯಮ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಇರಾನ್​ನಲ್ಲಿ ಪೆಜೆಶ್ಕಿಯಾನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ: 19 ಸದಸ್ಯರ ಸಚಿವ ಸಂಪುಟಕ್ಕೆ ಸಂಸತ್ ಅನುಮೋದನೆ - Iran New Government

ABOUT THE AUTHOR

...view details