ನವದೆಹಲಿ : ಚುನಾವಣಾ ರ್ಯಾಲಿಯಲ್ಲಿ ತಮ್ಮ ಮೇಲಾದ ಕೊಲೆ ಯತ್ನದ ನಂತರ ಇದೇ ಪ್ರಥಮ ಬಾರಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅವತ್ತು ದೇವರು ನನ್ನ ಜೊತೆಗಿದ್ದ ಎಂದಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಶುಕ್ರವಾರ ಪೆನ್ಸಿಲ್ವೇನಿಯಾದಲ್ಲಿ ತಮ್ಮ ಮೇಲೆ ನಡೆದ ಕೊಲೆ ಯತ್ನದ ಅನುಭವವನ್ನು ವಿವರಿಸಿದ್ದಾರೆ.
ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಸಮಾರೋಪ ರಾತ್ರಿಯಲ್ಲಿ ಭಾಷಣ ಮಾಡಿದ ಟ್ರಂಪ್, ಅಧ್ಯಕ್ಷೀಯ ಅಭ್ಯರ್ಥಿಯಾಗಿ ತಮ್ಮ ಮೂರನೇ ಜಿಒಪಿ ನಾಮನಿರ್ದೇಶನವನ್ನು ಸ್ವೀಕರಿಸಿದರು. ಅಮೆರಿಕನ್ನರು ಒಗ್ಗಟ್ಟಾಗುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
"ನಾನು ಈ ರಾತ್ರಿ ಇಲ್ಲಿ ಇರದಿರುವ ಸಾಧ್ಯತೆಯಿತ್ತು. ಇಲ್ಲಿಗೆ ನಾನು ಬರದೇ ಇರುವ ಸಾಧ್ಯತೆಯಿತ್ತು" ಎಂದು ಟ್ರಂಪ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಜನಸಮೂಹ, "ಹಾಗೇನಿಲ್ಲ, ನೀವು ಇಲ್ಲಿಗೆ ಬಂದೇ ಬರುವಿರಿ" ಎಂದು ಹುರಿದುಂಬಿಸಿತು.
ಗುಂಡಿನ ದಾಳಿಯ ಕ್ಷಣಗಳನ್ನು ನೆನಪಿಸಿಕೊಂಡು ಮಾತನಾಡಿದ ಟ್ರಂಪ್, "ದಕ್ಷಿಣ ಗಡಿಯಲ್ಲಿ ವಲಸೆಯನ್ನು ತಡೆಗಟ್ಟುವ ಬಗ್ಗೆ ನನ್ನ ಆಡಳಿತಾವಧಿಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ನಾನು ತುಂಬಾ ಹೆಮ್ಮೆಯಿಂದ ಮಾತನಾಡಲು ಪ್ರಾರಂಭಿಸಿದ್ದೆ. ನನ್ನ ಹಿಂದೆ, ಬಲಭಾಗದಲ್ಲಿದ್ದ ದೊಡ್ಡ ಪರದೆಯ ಮೇಲೆ ಗಡಿ ದಾಟಿ ಬಂದವರ ಸಂಖ್ಯೆಯನ್ನು ಪ್ರದರ್ಶಿಸಲಾಯಿತು. ಆ ಚಾರ್ಟ್ ನೋಡಲು ನಾನು ನನ್ನ ಬಲಕ್ಕೆ ತಿರುಗಲು ಪ್ರಾರಂಭಿಸಿದೆ. ಹಾಗೆಯೇ ನಾನು ಸ್ವಲ್ಪ ಮುಂದೆ ತಿರುಗಲು ಆರಂಭಿಸಿದೆ.. ಆದರೆ ಅಷ್ಟಕ್ಕೇ ನಿಂತಿದ್ದು ನನ್ನ ಅದೃಷ್ಟ" ಎಂದು ಅವರು ಹೇಳಿದರು.
"ನನ್ನ ಕಿವಿಯ ಬಳಿ ಜೋರಾದ ಸುಂಯ್ ಎಂಬ ಶಬ್ದ ಕೇಳಿಸಿತು. ಕಿವಿಗೆ ಬಲವಾಗಿ ಏನೋ ಅಪ್ಪಳಿಸಿದ ಅನುಭವವಾಯಿತು. ಓಹ್ .. ಏನಿದು ಬುಲೆಟ್ ತಾಗಿದೆಯಲ್ಲ ಎಂದು ನನಗೆ ನಾನೇ ಹೇಳಿಕೊಂಡೆ.. ಬಲಗೈಯಿಂದ ಕಿವಿಯನ್ನು ಮುಟ್ಟಿ ನೋಡಿದರೆ ನನ್ನ ಕೈ ರಕ್ತದಿಂದ ಆವೃತವಾಗಿತ್ತು." ಎಂದು ಟ್ರಂಪ್ ಆ ಕ್ಷಣಗಳನ್ನು ನೆನಪಿಸಿಕೊಂಡರು.
ಇಡೀ ಅಮೆರಿಕದ ಜನತೆಗಾಗಿ ಕೆಲಸ ಮಾಡಲು ತಾವು ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ ಟ್ರಂಪ್, ದೇಶಕ್ಕೆ ನಾಲ್ಕು ಶ್ರೇಷ್ಠ ವರ್ಷಗಳನ್ನು ನೀಡುವುದಾಗಿ ಭರವಸೆ ನೀಡಿದರು. ಜುಲೈ 13 ರಂದು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲ್ಪಟ್ಟ ಶೂಟರ್ ಚುನಾವಣಾ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದಾಗ ಅವರ ಬಲ ಕಿವಿಗೆ ಗಾಯವಾಗಿತ್ತು.
ಇದನ್ನೂ ಓದಿ :ಬಾಂಗ್ಲಾದಲ್ಲಿ 'ಮೀಸಲಾತಿ' ಹಿಂಸಾಚಾರ: ಒಂದೇ ದಿನ 18 ಸಾವು, 2,500 ಮಂದಿಗೆ ಗಾಯ, ಮೇಘಾಲಯದತ್ತ ಭಾರತೀಯರು - Bangladesh Violence