ಕರ್ನಾಟಕ

karnataka

ETV Bharat / international

ವಿಶ್ವಾಸಮತ ಸೋತ ಚಾನ್ಸಲರ್ ಶೋಲ್ಜ್: ಜರ್ಮನಿಯಲ್ಲಿ ಅವಧಿ ಪೂರ್ವ ಚುನಾವಣೆ ಸಾಧ್ಯತೆ - CHANCELLOR OLAF SCHOLZ

ಜರ್ಮನಿಯ ಚಾನ್ಸಲರ್ ಶೋಲ್ಜ್ ವಿಶ್ವಾಸಮತ ಕಳೆದುಕೊಂಡಿದ್ದಾರೆ.

ಚಾನ್ಸಲರ್ ಶೋಲ್ಜ್
ಚಾನ್ಸಲರ್ ಶೋಲ್ಜ್ (IANS)

By ETV Bharat Karnataka Team

Published : Dec 17, 2024, 1:53 PM IST

ಬರ್ಲಿನ್: ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅವರು ಸೋಮವಾರ ಸಂಸತ್ತಿನಲ್ಲಿ ವಿಶ್ವಾಸ ಮತ ಯಾಚನೆಯಲ್ಲಿ ಸೋತಿದ್ದಾರೆ. ಹೀಗಾಗಿ 2025ರ ಫೆಬ್ರವರಿ 23ರಂದು ನಡೆಯಬೇಕಿದ್ದ ಚುನಾವಣೆಗಳು ಅದಕ್ಕೂ ಮುನ್ನವೇ ನಡೆಯುವ ಸಾಧ್ಯತೆಗಳಿವೆ. ಈ ವರ್ಷದ ನವೆಂಬರ್​ನಲ್ಲಿ ಮೂರು ಪಕ್ಷಗಳ ಮೈತ್ರಿ ಮುರಿದು ಬಿದ್ದ ನಂತರ ಚಾನ್ಸಲರ್ ಶೋಲ್ಜ್ ತಮ್ಮ ಪಕ್ಷದ ರಾಜಕೀಯ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ಚುನಾವಣೆಗಳೇ ಉತ್ತಮ ಮಾರ್ಗ ಎಂದು ಹೇಳಿದ್ದರು.

ಈಗ ಅಲ್ಪಮತದ ಸರ್ಕಾರವನ್ನು ಮುನ್ನಡೆಸುತ್ತಿರುವ ಶೋಲ್ಜ್, ತ್ವರಿತ ಚುನಾವಣೆಯು ಮತದಾರರಿಗೆ ದೇಶದ ರಾಜಕೀಯ ಹಾದಿಯನ್ನು ನಿರ್ಧರಿಸುವ ಅಧಿಕಾರವನ್ನು ನೀಡುತ್ತದೆ ಮತ್ತು ಮುಂಬರುವ ಚುನಾವಣೆಯು ಜರ್ಮನಿಯ ಭವಿಷ್ಯಕ್ಕೆ ನಿರ್ಣಾಯಕವಾಗಿದೆ ಎಂದು ತಿಳಿಸಿದರು.

ಸೋಲುವುದು ಖಚಿತವಾಗಿದ್ದರೂ ಶೋಲ್ಜ್​ ಉದ್ದೇಶ ಪೂರ್ವಕವಾಗಿಯೇ ವಿಶ್ವಾಸಮತ ಯಾಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸುವ ಹಾದಿಯನ್ನು ಅವರು ಸುಗಮಗೊಳಿಸಿದ್ದಾರೆ. ಸಂಸತ್ತನ್ನು ವಿಸರ್ಜಿಸುವಂತೆ ಮತ್ತು ಮುಂದಿನ ವರ್ಷದ ಫೆಬ್ರವರಿ 23 ಕ್ಕೆ ನಿಗದಿಯಾಗಿರುವ ಚುನಾವಣೆಯನ್ನು ಮುಂದಿನ 60 ದಿನಗಳೊಳಗೆ ನಡೆಸಬೇಕು ಎಂದು ಶೋಲ್ಜ್ ಈಗ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್ ಅವರಿಗೆ ಮನವಿ ಮಾಡಲಿದ್ದಾರೆ.

ವಿಶ್ವಾಸಮತ ಗೆಲ್ಲಲು ಶೋಲ್ಜ್​ ಅವರಿಗೆ 367 ಮತಗಳು ಬೇಕಾಗಿದ್ದವು. ಆದರೆ ಅವರಿಗೆ 207 ಮತಗಳು ಬಂದವು ಮತ್ತು 116 ಸಂಸದರು ಮತದಾನದಿಂದ ದೂರ ಉಳಿದರು. ಸೋಲಿನ ಹೊರತಾಗಿಯೂ ಶೋಲ್ಜ್ ಫಲಿತಾಂಶವನ್ನು ಸ್ವಾಗತಿಸಿದ್ದಾರೆ. ಇದು ಸಂಸತ್ತನ್ನು ವಿಸರ್ಜಿಸಿ ತ್ವರಿತವಾಗಿ ಚುನಾವಣೆ ನಡೆಸುವ ಕಾರ್ಯತಂತ್ರವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ಈ ಹಿಂದಿನ ಜರ್ಮನ್​ ಚಾನ್ಸಲರ್​ಗಳು 5 ಬಾರಿ ಇದೇ ತಂತ್ರವನ್ನು ಬಳಸಿದ್ದರು.

ಸಾಲ ನಿರ್ವಹಣೆಯ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ ಅವರನ್ನು ಚಾನ್ಸಲರ್ ವಜಾಗೊಳಿಸಿದ್ದನ್ನು ಪ್ರತಿಭಟಿಸಿ ಉದ್ಯಮ-ಪರ ಫ್ರೀ ಡೆಮಾಕ್ರಟ್ಸ್ (ಎಫ್​ಡಿಪಿ) ಮೈತ್ರಿ ಕಡಿದುಕೊಂಡ ನಂತರ ನವೆಂಬರ್​ನಲ್ಲಿ ಶೋಲ್ಜ್ ಅವರ ಮೂರು ಪಕ್ಷಗಳ ಮೈತ್ರಿಕೂಟ ಮುರಿದು ಬಿದ್ದಿತ್ತು. ಹೊಸ ಸರ್ಕಾರ ರಚನೆಯಾಗುವವರೆಗೂ ಶೋಲ್ಜ್ ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.

ಯುದ್ಧದಿಂದ ಪಾರಾಗಲು ನಿರಾಶ್ರಿತರಾಗಿ ಜರ್ಮನಿಗೆ ಬಂದ ಸಿರಿಯನ್ನರನ್ನು ಈಗ ಅಸ್ಸಾದ್ ಆಡಳಿತದ ಪತನದ ನಂತರ ಸ್ವದೇಶಕ್ಕೆ ಮರಳುವಂತೆ ಒತ್ತಾಯಿಸಬೇಕೇ ಎಂಬ ಬಗ್ಗೆ ಈಗ ಜರ್ಮನಿಯಲ್ಲಿ ಚರ್ಚೆ ನಡೆಯುತ್ತಿದೆ. ಸಂಪ್ರದಾಯವಾದಿ ವಿರೋಧ ಪಕ್ಷ ಮತ್ತು ಬಲಪಂಥೀಯ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್​ಡಿ) ಯಿಂದ ಸಿರಿಯನ್ನರಿಗೆ ಆಶ್ರಯ ನೀಡುವ ನೀತಿಯ ಬಗ್ಗೆ ಆಮೂಲಾಗ್ರ ಮರುಚಿಂತನೆ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ :2025ರ ಕೊನೆ/2026ರ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ: ಯೂನುಸ್ - BANGLADESH POLITICS

ABOUT THE AUTHOR

...view details