ರಮಲ್ಲಾ (ಪ್ಯಾಲೆಸ್ಟೈನ್) : ಇಸ್ರೇಲ್ ನಡೆಸುತ್ತಿರುವ ದಾಳಿಗಳಿಂದ ಗಾಜಾ ಪಟ್ಟಿಯಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದ್ದು, ಅಲ್ಲಿ ಈಗ ಕರೆನ್ಸಿ ನೋಟುಗಳ ತೀವ್ರ ಕೊರತೆ ಉಂಟಾಗಿದೆ ಎಂದು ಪ್ಯಾಲೆಸ್ಟೈನ್ ಹಣಕಾಸು ಪ್ರಾಧಿಕಾರ (ಪಿಎಂಎ) ಹೇಳಿದೆ. ಯುದ್ಧದ ಕಾರಣದಿಂದ ಅನೇಕ ಬ್ಯಾಂಕುಗಳು ನಾಶವಾಗಿವೆ ಮತ್ತು ಬಾಂಬ್ ಸ್ಫೋಟ, ವಿದ್ಯುತ್ ಕಡಿತ ಮತ್ತು ಭದ್ರತಾ ಸಮಸ್ಯೆಗಳಿಂದಾಗಿ ಇಡೀ ಪ್ರದೇಶದಲ್ಲಿ ಉಳಿದ ಬ್ಯಾಂಕ್ ಶಾಖೆಗಳನ್ನು ತೆರೆಯುವುದು ಅಸಾಧ್ಯವಾಗಿದೆ ಎಂದು ಪಿಎಂಎ ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಜಾದಲ್ಲಿನ ಬಹುತೇಕ ಎಟಿಎಂಗಳು ಹಾಳಾಗಿರುವುದರಿಂದ ನಗದು ಕೊರತೆ ತೀವ್ರವಾಗಿದೆ. ಪರವಾನಗಿ ಪಡೆಯದೇ ಕರೆನ್ಸಿ ವಿನಿಮಯ ಮಾಡಿಕೊಡುತ್ತಿರುವ ಕೆಲವರು ಸಾಮಾನ್ಯ ಜನತೆ ಮತ್ತು ವ್ಯಾಪಾರಿಗಳ ಸುಲಿಗೆ ಮಾಡುತ್ತಿದ್ದಾರೆ. ಕಾರ್ಡ್ಗಳನ್ನು ಸ್ವೈಪ್ ಮಾಡಿ ಖಾತೆಯಲ್ಲಿನ ಹಣ ನೀಡಲು ಸುಮಾರು ಶೇಕಡಾ 15ರಷ್ಟು ಕಮಿಷನ್ ಪಡೆಯಲಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ಯಾಲೆಸ್ಟೈನ್ ಹಣಕಾಸು ಪ್ರಾಧಿಕಾರ ತಿಳಿಸಿದೆ.
ಯಾಹ್ಯಾ ಸಿನ್ವರ್ ಕೊಲ್ಲುತ್ತೇವೆ ಎಂದು ಪುನರುಚ್ಚರಿಸಿದ ಇಸ್ರೇಲ್ ಪ್ರಧಾನಿ: ಯಾವುದೇ ಬೆಲೆ ತೆತ್ತಾದರೂ ಸರಿ, ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರನ್ನು ಕೊಲ್ಲಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಭಾನುವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೇಲ್ ಪ್ರಧಾನಿ, ಪ್ರಾಚೀನ ನಗರ ಪುರಿಮ್ನಲ್ಲಿ ಹಮಾನ್ ಕೊಲ್ಲಲ್ಪಟ್ಟಂತೆಯೇ, ಸಿನ್ವರ್ ಕೂಡ ಕೊಲ್ಲಲ್ಪಡುತ್ತಾರೆ ಎಂದು ಹೇಳಿದರು.