ಕರ್ನಾಟಕ

karnataka

ETV Bharat / international

ತೋಷಖಾನಾ ಕೇಸ್​​ನಲ್ಲಿ ಇಮ್ರಾನ್​ ಖಾನ್​ಗೆ ಮತ್ತೆ 14 ವರ್ಷ ಜೈಲು ಶಿಕ್ಷೆ: ಒಟ್ಟು 27 ವರ್ಷ ಜೈಲೇ ಗತಿ! - Former Pakistani Prime Minister

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತೊಂದು ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಅವರು ಒಟ್ಟು 27 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಇಮ್ರಾನ್​ ಖಾನ್​
ಇಮ್ರಾನ್​ ಖಾನ್​

By ETV Bharat Karnataka Team

Published : Jan 31, 2024, 8:19 PM IST

ಇಸ್ಲಾಮಾಬಾದ್ (ಪಾಕಿಸ್ತಾನ) :ಸರ್ಕಾರದ ಉಡುಗೊರೆಗಳನ್ನು ಮಾರಾಟ ಮಾಡಿದ ಪ್ರಕರಣವಾದ ತೋಷಖಾನಾ ಕೇಸ್​ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮುನ್ನ ಅವರಿಗೆ ಇದೇ ಕೇಸ್​ನಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸೈಫರ್​ ಕೇಸ್​ನ 10 ವರ್ಷ ಸೇರಿ ಒಟ್ಟು 27 ವರ್ಷ ಜೈಲು ಶಿಕ್ಷೆಗೆ ಗುರಿಯಾದಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಅಲ್ಲಿನ ಕೋರ್ಟ್​, ಸರ್ಕಾರ ವಸ್ತುಗಳನ್ನು ಮಾರಾಟ ಮಾಡಿರುವುದು ಸಾಬೀತಾಗಿದ್ದು, 14 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ತೀರ್ಪು ನೀಡಿದೆ. ಇದರಲ್ಲಿ ಖಾನ್​ ಪತ್ನಿಯನ್ನೂ ಅಪರಾಧಿಯನ್ನಾಗಿ ಘೋಷಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ವಕ್ತಾರ ಜುಲ್ಫಿಕರ್ ಬುಖಾರಿ ಮಾತನಾಡಿ, ನಮ್ಮ ನಾಯಕ ಇಮ್ರಾನ್​ ಖಾನ್ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ನಮ್ಮ ಕಾನೂನು ತಂಡ ಬರುವ ಮೊದಲೇ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ನ್ಯಾಯಾಧೀಶರು ಆತುರಾತುರವಾಗಿ ತೀರ್ಪು ನೀಡಿದ್ದಾರೆ ಎಂದು ಆರೋಪಿಸಿದರು. ಇದು ಮಾನವನ ಮೂಲ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಎಂದೂ ಹೇಳಿದ್ದಾರೆ.

ಏನಿದು ಪ್ರಕರಣ?:ತೋಷಖಾನವು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿರುವ ಒಂದು ಇಲಾಖೆಯಾಗಿದೆ. ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸುತ್ತದೆ. ಇಮ್ರಾನ್​ ಖಾನ್ ಅವರು ಬೆಲೆಬಾಳುವ ವಾಚ್, ಆಭರಣಗಳು ಸೇರಿದಂತೆ ಕೆಲ ಉಡುಗೊರೆಗಳನ್ನು ತಮ್ಮ ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ. ಇದರ ವಿರುದ್ಧ ಪ್ರಕರಣ ದಾಖಲಾಗಿ 2022 ರಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸದ್ಯ ಇಮ್ರಾನ್​ ಖಾನ್​, ರಾವಲ್ಪಿಂಡಿಯ ಗ್ಯಾರಿಸನ್ ಸಿಟಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸೈಫರ್​ ಕೇಸ್​ನಲ್ಲಿ 10 ವರ್ಷ ಜೈಲು:ಇಮ್ರಾನ್ ಖಾನ್​ಗೆ ವಿರುದ್ಧ ದಾಖಲಾಗಿದ್ದ ರಹಸ್ಯ ದಾಖಲೆ ಸೋರಿಕೆ (ಸೈಪರ್​​ ಕೇಸ್​) ಪ್ರಕರಣದಲ್ಲಿ ಜನವರಿ 30 ರಂದು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಯೂ ಇದರಲ್ಲಿ ಅಪರಾಧಿ ಎಂದು ಕೋರ್ಟ್​ ಹೇಳಿದೆ.

ಇಮ್ರಾನ್​ ಖಾನ್​ ಅಧಿಕಾರವಧಿಯಲ್ಲಿ ಅಮೆರಿಕದ ವಾಷಿಂಗ್ಟನ್​ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಕಳುಹಿಸಿದ ಕೇಬಲ್​ ಸಂದೇಶವನ್ನು ಬಹಿರಂಗಗೊಳಿಸಿ ರಹಸ್ಯ ಕಾನೂನು ಉಲ್ಲಂಘನೆ ಮಾಡಿದ ಆರೋಪ ಇಬ್ಬರ ಮೇಲಿದೆ. ಇದರ ವಿರುದ್ಧ ಫೆಡರಲ್​ ಇನ್ವೆಸ್ಟಿಗೇಶನ್​ ಏಜೆನ್ಸಿಯು ಇಮ್ರಾನ್​ ಖಾನ್​ ಮತ್ತು ಮಹಮೂದ್ ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ವಿಶೇಷ ಕೋರ್ಟ್​ ಇಬ್ಬರನ್ನು ದೋಷಿ ಎಂದು ತೀರ್ಮಾನಿಸಿ 10 ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಿದೆ.

ಇದನ್ನೂ ಓದಿ:ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ​ ಮತ್ತೊಂದು ಆಘಾತ: ಸೈಫರ್​ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ

ABOUT THE AUTHOR

...view details