ನ್ಯೂಯಾರ್ಕ್, ಅಮೆರಿಕ: ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಗೆ ಅಧಿಕೃತ ರಜೆ ಘೋಷಣೆ ಮಾಡುವ ಮೂಲಕ ಐತಿಹಾಸಿಕ ನಡೆ ಇಟ್ಟಿದೆ.
ನ್ಯೂಯಾರ್ಕ್ ನಗರದಲ್ಲಿ 1.1 ಮಿಲಿಯನ್ ವಿದ್ಯಾರ್ಥಿಗಳು ಈ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ನ್ಯೂಯಾರ್ಕ್ನ ಸಾರ್ವಜನಿಕ ಶಾಲೆಗಳಲ್ಲಿ ದೀಪಾವಳಿಗೆ ರಜೆ ಘೋಷಣೆ ಮಾಡುವ ಸಂಬಂದ ಕಳೆದ ವರ್ಷ ಗವರ್ನರ್ ಕ್ಯಾತಿ ಹೊಚುಲ್ ಶಾಸನಕ್ಕೆ ಸಹಿ ಹಾಕಿದ್ದರು. ಇದು ಈ ವರ್ಷದಿಂದ ಜಾರಿಯಾಗಿದ್ದು, ದೀಪಾವಳಿ ಹಿನ್ನೆಲೆ ನವೆಂಬರ್ 1 ಶಾಲೆಗಳಿಗೆ ರಜೆ ನೀಡಲಾಗಿದೆ.
ಇದೇ ಮೊದಲ ಬಾರಿಗೆ ದೀಪಾವಳಿಗೆ ರಜೆ:ನ್ಯೂಯಾರ್ಕ್ ನಗರದ ಮೇಯರ್ ಕಚೇರಿಯ ಡೆಪ್ಯುಟಿ ಕಮಿಷನರ್ ದಿಲೀಪ್ ಚೌಹಾಣ್ ಮಾತನಾಡಿ, ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿಗೆ ದೀಪಾವಳಿ ದಿನದಂದು ಅಧಿಕೃತವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇದು ನಮ್ಮ ನಗರದ ವೈವಿಧ್ಯತೆ ಮತ್ತು ನಮ್ಮ ಸಮುದಾಯ ಮತ್ತು ನಾಯಕರ ದಣಿವರಿಯದ ಪ್ರಯತ್ನಗಳಿಂದಾಗಿ ಹಬ್ಬವನ್ನು ಆಚರಿಸುತ್ತಿರುವುದು ಒಂದು ಮೈಲಿಗಲ್ಲಾಗಿದೆ. 1.1 ಮಿಲಿಯನ್ ವಿದ್ಯಾರ್ಥಿಗಳು ಈ ಹಬ್ಬವನ್ನು ಸಂಭ್ರಮಿಸಲಿದ್ದಾರೆ. ದೀಪಾವಳಿಯು ಏಕತೆಯ ಸಂಕೇತವಾಗಿದ್ದು, ಕತ್ತಲೆಯ ಮೇಲೆ ಬೆಳಕು ಮತ್ತು ಅಜ್ಞಾನದ ಮೇಲೆ ಜ್ಞಾನದ ಆಚರಣೆಯಾಗಿದೆ ಎಂದಿದ್ದಾರೆ.
ನ್ಯೂಯಾರ್ಕ್ಗೆ ವಲಸೆ ಬಂದವರು, ಈ ರಜಾ ದಿನವನ್ನು ಕುಟುಂಬಗಳು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ದಿನದಂದು ರಜೆ ನೀಡುವುದು ಸವಾಲಿನಿಂದ ಕೂಡಿತ್ತು. ಆದರೂ ವಿಶೇಷವಾಗಿ ಸಮತೋಲಿತವಾದ ನಿರ್ಧಾರ ಕೈಗೊಂಡು ಈ ರಜೆ ಘೋಷಿಸಲಾಗಿದೆ. ಈ ಮೂಲಕ ಎಲ್ಲ ಸಮುದಾಯಗಳನ್ನು ಗೌರವದಿಂದ ಕಾಣುವುದು ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಚಿಂತನಶೀಲ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ ಎಂದರು.
ದೀಪಾವಳಿ ವೈವಿಧ್ಯತೆಯ ವಿಶಿಷ್ಟ ಹಬ್ಬವಾಗಿದೆ ಎಂಬುದನ್ನು ನೆನಪಿಸುತ್ತದೆ. ಈ ರಜಾ ದಿನವೂ ನಮ್ಮ ನಡುವೆ ಏಕತೆ ಮತ್ತು ಸಮೃದ್ಧತೆಯನ್ನುಂಟು ಮಾಡುತ್ತದೆ ಎಂದಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಹಲವಾರು ಸಮುದಾಯ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮೂಲಕ ದೀಪಾವಳಿ ಆಚರಣೆ ಪ್ರಾರಂಭಿಸಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆ ನ್ಯೂಯಾರ್ಕ್ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ದೀಪಾವಳಿಗೆ ಶುಭಾಶಯ ಕೋರಲಾಯಿತು. ಅಷ್ಟೆ ಅಲ್ಲದೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಶ್ವೇತಭವನದಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಅಮೆರಿಕದ ಒರೆಗಾನ್ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ: ಸಾವು- ನೋವಿನ ಮಾಹಿತಿ ಇಲ್ಲ