ಮ್ಯಾಡ್ರಿಡ್,ಸ್ಪೇನ್: ದೇಶದ ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿನ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ-ಲಾ ಮಂಚ ಮತ್ತು ಆಂಡಲೂಸಿಯಾ ಪ್ರದೇಶಗಳಲ್ಲಿ 205 ಜನರು ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಪ್ರವಾಹದಿಂದ ಸ್ಪೇನ್ ಭಾರಿ ನಷ್ಟ ಅನುಭವಿಸಿದ್ದು, ರಾಷ್ಟ್ರೀಯ ವಿಕೋಪದಿಂದ ತತ್ತರಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋಗಳು ಅಲ್ಲಿನ ಪ್ರವಾಹದ ಭೀಕರತೆ ತೋರಿಸುತ್ತಿವೆ. ಕಾರುಗಳನ್ನು ಆಟಿಕೆಗಳಂತೆ ರಾಶಿ ಹಾಕಿರುವುದು ಕಂಡು ಬಂದಿದ್ದು, ಭಾರಿ ವಿನಾಶಕ್ಕೆ ಸಾಕ್ಷಿ ಒದಗಿಸಿದಂತಿದೆ. ಜನರು ಆಶ್ರಯ ಪಡೆಯಲು ತಮ್ಮ ಮನೆಗಳು ಮತ್ತು ಕಾರುಗಳ ಮೇಲ್ಛಾವಣಿಗಳ ಮೇಲೆ ಹತ್ತಿ ನಿಂತಿರುವ ದೃಶ್ಯಗಳು ಕಂಡಿ ಬಂದಿವೆ. ಸೇತುವೆಗಳು, ರೈಲ್ವೆ ಸುರಂಗಗಳು ಕುಸಿದಿದ್ದು, ಜಮೀನುಗಳು ಜೌಗು ಹಿಡಿದಿವೆ.
ಸೆಂಟರ್ ಫಾರ್ ಆರ್ಡಿನೇಟೆಡ್ ಮತ್ತು ಇಂಟಿಗ್ರೇಟೆಡ್ ಆಪರೇಷನ್ಸ್ ವರದಿಯ ಪ್ರಕಾರ ಬುಧವಾರ ಬೆಳಗ್ಗೆ ಅಧಿಕೃತ ಸಾವಿನ ಸಂಖ್ಯೆ 205 ಕ್ಕೆ ಏರಿದೆ, ವೇಲೆನ್ಸಿಯಾ ಪ್ರದೇಶದಲ್ಲಿ 202 ಸಾವುಗಳು, ಕ್ಯಾಸ್ಟಿಲ್ಲಾ-ಲಾ ಮಂಚಾದಲ್ಲಿ ಎರಡು ಮತ್ತು ಆಂಡಲೂಸಿಯಾದಲ್ಲಿ ಒಂದು ಸಾವು ಸಂಭವಿಸಿದೆ ಎಂದು ವರದಿ ಮಾಡಿದೆ.
ಫೆರಿಯಾ ಡಿ ವೇಲೆನ್ಸಿಯಾ ಪ್ರದರ್ಶನ ಕೇಂದ್ರವನ್ನು ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದೆ. ಪ್ರವಾಹದಲ್ಲಿ ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 1,900 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಪ್ಯಾನಿಷ್ ಪತ್ರಿಕೆ Eldiario.es ಶುಕ್ರವಾರ ವರದಿ ಮಾಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪ್ರತ್ಯಕ್ಷದರ್ಶಿಗಳು ತಮ್ಮ ಕಾರುಗಳನ್ನು ಉಳಿಸಲು ಅನೇಕ ಜನರು ಭೂಗತ ಗ್ಯಾರೇಜ್‌ಗಳ ಮೊರೆ ಹೋಗಿದ್ದಾರೆ. ಪ್ರವಾಹದ ಸಮಯದಲ್ಲಿ 130,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರದ ವೇಳೆಗೆ 23,000 ಮನೆಗಳು ಇನ್ನೂ ವಿದ್ಯುತ್ ಇಲ್ಲದೆ ಉಳಿದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.