ಜೆರುಸಲೇಂ/ಗಾಜಾ:ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಒಪ್ಪಂದದ ಮೊದಲ ದಿನವೇ ಗಾಜಾದಲ್ಲಿ ಹಮಾಸ್ ಸೆರೆಯಲ್ಲಿದ್ದು, ಬಿಡುಗಡೆಯಾದ ಮೂವರು ಮಹಿಳೆಯರು ಇಸ್ರೇಲ್‌ಗೆ ಆಗಮಿಸಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರ ಬಿಡುಗಡೆ: ಬ್ರಿಟಿಷ್-ಇಸ್ರೇಲಿ 28 ವರ್ಷದ ಎಮಿಲಿ ದಮರಿ, 30 ವರ್ಷದ ಪಶುವೈದ್ಯಕೀಯ ನರ್ಸ್ ಡೊರೊನ್ ಸ್ಟೈನ್‌ಬ್ರೆಚರ್, 23 ವರ್ಷದ ರೋಮಿ ಗೊನೆನ್ ಬಿಡುಗಡೆಗೊಂಡ ಮಹಿಳೆಯರಾಗಿದ್ದಾರೆ. ನೋವಾ ಸಂಗೀತ ಉತ್ಸವದಿಂದ ಇವರೆಲ್ಲರನ್ನು ಹಮಾಸ್ ಉಗ್ರರು ಅಪಹರಿಸಿದ್ದರು. ಹಮಾಸ್ ನಿಂದ ಅಪಹರಣಕ್ಕೆ ಒಳಗಾಗಿ 471 ದಿನಗಳ ಸೆರೆಯಲ್ಲಿದ್ದ ಇವರು ಅಂತಿಮವಾಗಿ ಭಾನುವಾರ ಬಿಡುಗಡೆಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ 33 ಮಂದಿ ಬಿಡುಗಡೆ ನಿರೀಕ್ಷೆ: ಮೂರು - ಹಂತದ ಒಪ್ಪಂದದ ಅಡಿಯಲ್ಲಿ ಭಾನುವಾರ ಒತ್ತೆಯಾಳುಗಳ ಬಿಡುಗಡೆ ಆಗಿದೆ. ಆರು ವಾರಗಳ ಶಾಂತಿ ಒಪ್ಪಂದ ಈ ಮೂಲಕ ಜಾರಿಗೆ ಬಂದಿದೆ. ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ, 46,900 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಈ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
ಒಪ್ಪಂದದ ಪ್ರಕಾರ, ಹಮಾಸ್ ಪ್ರತಿ ವಾರ ಮೂರರಿಂದ ನಾಲ್ಕು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತಾ ಬರುತ್ತದೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತನ್ನ ಜೈಲಿನಲ್ಲಿರುವ ನೂರಾರು ಪ್ಯಾಲೆಸ್ತೀನ್ ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನ 90 ಜನರನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ.
ರೆಡ್ ಕ್ರಾಸ್ ನೇತೃತ್ವದಲ್ಲಿ ಒತ್ತೆಯಾಳುಗಳ ಬಿಡುಗಡೆ:ಗಾಜಾದಲ್ಲಿನ ರೆಡ್‌ಕ್ರಾಸ್ ಮೂಲಕ ಹಮಾಸ್ ಮೂವರು ಮಹಿಳಾ ಒತ್ತೆಯಾಳುಗಳನ್ನು ಇಸ್ರೇಲಿ ಪಡೆಗಳಿಗೆ ಹಸ್ತಾಂತರಿಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಸ್ವಲ್ಪ ಸಮಯದ ಹಿಂದೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮತ್ತು ಶಿನ್ ಬೆಟ್ ಪಡೆಗಳೊಂದಿಗೆ ಬಿಡುಗಡೆಯಾದ ಒತ್ತೆಯಾಳುಗಳು ಗಾಜಾ ಗಡಿಯನ್ನು ದಾಟಿದರು ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.