ಬಹುನಿರೀಕ್ಷಿತ ಜಿ 7 ಸಭೆ ಮುಕ್ತಾಯಗೊಂಡಿದೆ. 1975ರಲ್ಲಿ ಸ್ಥಾಪಿತವಾದ ಈ ಸಂಘಟನೆಯು ತನ್ನನ್ನು ತಾನು 'ಕೈಗಾರಿಕೀಕರಣಗೊಂಡ ಪ್ರಜಾಪ್ರಭುತ್ವ ದೇಶಗಳ ಅನೌಪಚಾರಿಕ ಬಣ' ಎಂದು ಕರೆದುಕೊಳ್ಳುತ್ತದೆ. ಯುಎಸ್, ಕೆನಡಾ, ಯುಕೆ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಜಪಾನ್ ಇದರ ಸದಸ್ಯ ರಾಷ್ಟ್ರಗಳಾಗಿವೆ. ಈ ಹಿಂದೆ ಈ ಬಣದಲ್ಲಿ ರಷ್ಯಾ ಇದ್ದಾಗ ಇದು ಜಿ 8 ಆಗಿತ್ತು. ಆದರೆ 2014 ರಲ್ಲಿ ಕ್ರಿಮಿಯಾವನ್ನು ಮಾಸ್ಕೋ ಸ್ವಾಧೀನಪಡಿಸಿಕೊಂಡ ನಂತರ, ಅದನ್ನು ಬಣದಿಂದ ಅಮಾನತುಗೊಳಿಸಲಾಯಿತು.
ಜಾಗತಿಕ ಆರ್ಥಿಕ ಆಡಳಿತ, ಅಂತರರಾಷ್ಟ್ರೀಯ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಈ ಗುಂಪು ಪ್ರತಿವರ್ಷವೂ ಸಭೆ ನಡೆಸುತ್ತದೆ. ಜಿ 7 ಯಾವುದೇ ಔಪಚಾರಿಕ ಒಪ್ಪಂದವನ್ನು ಹೊಂದಿಲ್ಲ ಮತ್ತು ವಿಶ್ವದ ಎಲ್ಲಯೂ ಶಾಶ್ವತ ಸಚಿವಾಲಯ ಅಥವಾ ಕಚೇರಿಯನ್ನು ಹೊಂದಿಲ್ಲ. ಆತಿಥೇಯ ದೇಶವೇ ವಾರ್ಷಿಕ ಸಭೆ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ. ಇಟಲಿ ಈ ವರ್ಷದ ಆತಿಥ್ಯ ವಹಿಸಿದರೆ, ಕೆನಡಾ ಮುಂದಿನ ವರ್ಷ ಆತಿಥ್ಯ ವಹಿಸಲಿದೆ.
ಯುರೋಪ್ ಖಂಡವನ್ನು ಒಟ್ಟಾಗಿ ಪ್ರತಿನಿಧಿಸುವ ಯುರೋಪಿಯನ್ ಯೂನಿಯನ್ (ಇಯು) ಜಿ 7 ನ 'ಎಣಿಕೆ ಮಾಡದ' ಸದಸ್ಯ ರಾಷ್ಟ್ರವಾಗಿದೆ ಮತ್ತು ಇದು ಅಧ್ಯಕ್ಷ ಸ್ಥಾನದ ಹಕ್ಕುದಾರಿಕೆಯನ್ನು ಹೊಂದಿಲ್ಲ. ವಿಶ್ವ ಬ್ಯಾಂಕ್ ಮತ್ತು ವಿಶ್ವಸಂಸ್ಥೆ ಸೇರಿದಂತೆ ಇತರ ವಿಶ್ವದ ಸಂಸ್ಥೆಗಳು ಆಹ್ವಾನಿತ ಸಂಸ್ಥೆಗಳಾಗಿರುತ್ತವೆ. ಭಾರತವು 2019 ರಿಂದ ಖಾಯಂ ಸದಸ್ಯೇತರ ಆಹ್ವಾನಿತ ರಾಷ್ಟ್ರವಾಗಿದೆ. ಆದರೂ ಅದು ಹಿಂದಿನ ಹಲವಾರು ಶೃಂಗಸಭೆಗಳಲ್ಲಿ ಭಾಗವಹಿಸಿದೆ. ಇದರರ್ಥ ಭಾರತವು ಗುಂಪಿನ 'ಔಟ್ ರೀಚ್ ಸೆಷನ್ಗಳಲ್ಲಿ' ಭಾಗವಹಿಸುತ್ತದೆ.
ಈ ವರ್ಷದ ಆಹ್ವಾನಿತರಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಜೆಲೆನ್ ಸ್ಕಿ ಕೂಡ ಇದ್ದರು. ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿರುವುದನ್ನು ಇದು ಸೂಚಿಸುತ್ತದೆ. ಆಯಾ ದೇಶಗಳಲ್ಲಿ ಫ್ರೀಜ್ ಮಾಡಲಾದ ರಷ್ಯಾದ ಸ್ವತ್ತುಗಳನ್ನು ಬಳಸಿಕೊಂಡು ಗುಂಪಿನ ಸದಸ್ಯರು ಉಕ್ರೇನ್ ಗಾಗಿ 50 ಬಿಲಿಯನ್ ಯುಎಸ್ ಡಾಲರ್ ಸಂಗ್ರಹಿಸುವ ಬಗ್ಗೆ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಯಿತು. ಆಫ್ರಿಕಾದಲ್ಲಿ ಹೂಡಿಕೆ ಮಾಡುವುದು, ಕೃತಕ ಬುದ್ಧಿಮತ್ತೆ ಸೇರಿದಂತೆ ಅಕ್ರಮ ವಲಸೆಯನ್ನು ನಿಗ್ರಹಿಸುವ ವಿಚಾರಗಳು ಸಭೆಯಲ್ಲಿ ಚರ್ಚಿಸಲಾದ ಇತರ ವಿಷಯಗಳಾಗಿವೆ. ಈ ವೇದಿಕೆಯು ಸದಸ್ಯ ರಾಷ್ಟ್ರಗಳಿಗೆ ದ್ವಿಪಕ್ಷೀಯ ಸಭೆಗಳಿಗೆ ಅವಕಾಶ ಒದಗಿಸುತ್ತದೆ.
ಇತ್ತ ಉಕ್ರೇನ್ ಬಗ್ಗೆ ಚರ್ಚಿಸಲು ಜಿ 7 ತಯಾರಾಗುತ್ತಿರುವಂತೆಯೇ ಅತ್ತ ಅಧ್ಯಕ್ಷ ಪುಟಿನ್ ಮಾತುಕತೆ ಮತ್ತು ಕದನ ವಿರಾಮಕ್ಕೆ ತಮ್ಮ ಷರತ್ತುಗಳನ್ನು ಮುಂದಿಟ್ಟರು. ರಷ್ಯಾ ಪ್ರತಿಪಾದಿಸಿದ ಪ್ರದೇಶದಿಂದ ಉಕ್ರೇನ್ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದು, ಉಕ್ರೇನ್ ನ್ಯಾಟೋಗೆ ಸೇರದಿರುವುದು, ಉಕ್ರೇನ್ನ ನಿಶಸ್ತ್ರೀಕರಣ ಮತ್ತು ಮಾಸ್ಕೋ ವಿರುದ್ಧದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದು ಪುಟಿನ್ ಅವರ ಷರತ್ತುಗಳಲ್ಲಿ ಸೇರಿವೆ. ಇದು ಜಿ 7 ಚರ್ಚೆಗಳ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಸ್ವಿಟ್ಜರ್ಲೆಂಡ್ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ನಿರೀಕ್ಷೆಯಂತೆ ಜಿ7 ಸಭೆಯಲ್ಲಿ ಪುಟಿನ್ ಅವರ ಷರತ್ತುಗಳನ್ನು ತಿರಸ್ಕರಿಸಲಾಯಿತು. ರಷ್ಯಾದ ಒತ್ತಡಕ್ಕೆ ಜಿ7 ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಲಾಯಿತು.
ಜಿ 7 ಬಣ ಅಗತ್ಯಕ್ಕಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆಯೇ?: ಒಂದು ಸಮಯದಲ್ಲಿ ಜಿ7 ಬಣವು ಪ್ರಮುಖ ಜಾಗತಿಕ ಆರ್ಥಿಕತೆಯ ದೇಶಗಳನ್ನು ಒಳಗೊಂಡಿತ್ತು. ಹೀಗಾಗಿ ಆಗ ಕೈಗೊಳ್ಳಲಾಗುತ್ತಿದ್ದ ನಿರ್ಧಾರಗಳು ಪರಿಣಾಮಕಾರಿಯಾಗಿರುತ್ತಿದ್ದವು. ಆದರೆ ಈಗಿನ ಸಮಯದಲ್ಲಿ ಇದು ಬದಲಾಗಿದೆ. ವಿಶ್ವದ ಜಿಡಿಪಿಯಲ್ಲಿ ಜಿ 7 ನ ಪಾಲು 2000 ರಿಂದ ನಿರಂತರವಾಗಿ ಕುಸಿಯುತ್ತಿದೆ. 2000ನೇ ಇಸವಿಯಲ್ಲಿ ಶೇ 40ರಷ್ಟಿದ್ದ ಈ ರಾಷ್ಟ್ರಗಳ ಖರೀದಿ ಶಕ್ತಿ ಸಮಾನತೆ (ಪಿಪಿಪಿ)ಯು ಈ ವರ್ಷ ಶೇ 30ಕ್ಕಿಂತ ಕಡಿಮೆಯಾಗಿದೆ. ಚೀನಾ ಮತ್ತು ಭಾರತಗಳು ದೊಡ್ಡ ಆರ್ಥಿಕತೆಗಳಾಗಿ ಬೆಳೆದಿರುವುದು ಮತ್ತು ಜಿ7 ರಾಷ್ಟ್ರಗಳ ಆರ್ಥಿಕ ಕುಸಿತಗಳು ಇದಕ್ಕೆ ಕಾರಣವಾಗಿದೆ. ಆದಾಗ್ಯೂ, ಈ ಗುಂಪು ಈಗಲೂ ಪ್ರಜಾಪ್ರಭುತ್ವ ದೇಶಗಳ ಬಣವಾಗಿ ಉಳಿದಿರುವುದು ಆಶಾದಾಯಕವಾಗಿದೆ.
ಇದನ್ನು ಇತರ ಜಾಗತಿಕ ಮಟ್ಟದ ಗುಂಪುಗಳೊಂದಿಗೆ ಹೋಲಿಸಿ ನೋಡಿದಾಗ ಕೆಲ ವಿಷಯಗಳು ಗಮನಸೆಳೆಯುತ್ತವೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿರುವ ಬ್ರಿಕ್ಸ್ ವಿಶ್ವದ ಜನಸಂಖ್ಯೆಯ 45% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿದೆ. 2022 ರಲ್ಲಿ, ಬ್ರಿಕ್ಸ್ ಸರಿಸುಮಾರು ಶೇ 32 ರಷ್ಟು ಖರೀದಿ ಶಕ್ತಿ ಸಮಾನತೆಯನ್ನು ಹೊಂದಿತ್ತು. ಇದು ಮುಂದಿನ ವಿಸ್ತರಣೆಯೊಂದಿಗೆ ಶೇ 36 ಕ್ಕೆ ಹೆಚ್ಚಾಗುತ್ತದೆ. ಬ್ರಿಕ್ಸ್ ಮತ್ತು ಜಿ 7 ನಡುವಿನ ಅಂತರವು ಮುಂಬರುವ ವರ್ಷಗಳಲ್ಲಿ ಬೆಳೆಯುತ್ತಲೇ ಸಾಗಲಿದೆ.
ಇನ್ನು ಎಸ್ಸಿಒ (ಶಾಂಘೈ ಸಹಕಾರ ಒಕ್ಕೂಟ) ಬ್ರಿಕ್ಸ್ನಂತೆಯೇ ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಚೀನಾ, ಭಾರತ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಇದರ ಸದಸ್ಯ ರಾಷ್ಟ್ರಗಳಾಗಿವೆ. ಇದು ನಾಲ್ಕು ವೀಕ್ಷಕ ರಾಷ್ಟ್ರಗಳು ಮತ್ತು ಆರು ಸಂವಾದ ಪಾಲುದಾರರನ್ನು ಸಹ ಹೊಂದಿದೆ. ಇದರ ಮೂಲ ಗುಂಪು ವಿಶ್ವದ ಜನಸಂಖ್ಯೆಯ ಸುಮಾರು ಶೇ 42ರಷ್ಟನ್ನು ಮತ್ತು ಜಾಗತಿಕ ಜಿಡಿಪಿಯ ಶೇ 25 ರಷ್ಟನ್ನು ಪ್ರತಿನಿಧಿಸುತ್ತದೆ.
ಪ್ರಸ್ತುತ ಜಿ 21 ಆಗಿರುವ ಜಿ 20 ಯು ಆಫ್ರಿಕನ್ ಒಕ್ಕೂಟದ ದೇಶಗಳ ಸೇರ್ಪಡೆಯೊಂದಿಗೆ, ಜಿ 7 ನ ಎಲ್ಲಾ ಸದಸ್ಯರನ್ನು ತನ್ನ ಭಾಗವಾಗಿ ಹೊಂದಿದೆ. ಇದು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು, ಜಾಗತಿಕ ಜಿಡಿಪಿಯ ಶೇ 85ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ 75ರಷ್ಟನ್ನು ಒಳಗೊಂಡಿದೆ. ಹೀಗಾಗಿ, ಜಿ 21 ತೆಗೆದುಕೊಂಡ ನಿರ್ಧಾರಗಳು ಜಿ 7 ಗಿಂತ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿವೆ.
ಇತರ ಪಾಶ್ಚಿಮಾತ್ಯ ಗುಂಪುಗಳು ಮತ್ತು ಸಂಸ್ಥೆಗಳಲ್ಲಿ ಮಾಡಿದಂತೆ ಅಮೆರಿಕವು ಜಿ7 ನಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿರದ ದೇಶಗಳ ವಿಷಯಗಳನ್ನು ಚರ್ಚೆಗಳಲ್ಲಿ ಪ್ರಸ್ತಾಪಿಸಲಾಗುತ್ತದೆ. ರಷ್ಯಾ ಮತ್ತು ಚೀನಾಗಳ ವಿರುದ್ಧ ಯಾವಾಗಲೂ ಟೀಕೆ ಮಾಡಲಾಗುತ್ತದೆ. ಪ್ರಸ್ತುತ ಶೃಂಗಸಭೆಯಲ್ಲಿ, ಚೀನಾ ರಷ್ಯಾವನ್ನು ಬೆಂಬಲಿಸುವುದನ್ನು ಮುಂದುವರಿಸಿದರೆ ಸಂಭಾವ್ಯ ನಿರ್ಬಂಧಗಳ ಬಗ್ಗೆ ಚೀನಾಕ್ಕೆ ಎಚ್ಚರಿಕೆ ನೀಡಲಾಯಿತು.