ಸಿಯೋಲ್(ಉತ್ತರ ಕೊರಿಯಾ):ಉಕ್ರೇನ್ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಉತ್ತರ ಕೊರಿಯಾದ ಸೈನಿಕನೊಬ್ಬನ ದೇಹಕ್ಕೆ ರಷ್ಯಾದ ಸೈನಿಕನೊಬ್ಬ ಬೆಂಕಿ ಹಚ್ಚುತ್ತಿರುವ ವಿಡಿಯೋ ಒಂದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹಂಚಿಕೊಂಡಿದ್ದಾರೆ. ಉತ್ತರ ಕೊರಿಯಾದ ಸೈನಿಕರು ರಷ್ಯಾದ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿರುವುದನ್ನು ಮರೆಮಾಚಲು ರಷ್ಯಾ ಸೈನಿಕರು ಇಂಥ ಕೃತ್ಯ ಎಸಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೆಲೆನ್ ಸ್ಕಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಅಪ್ಲೋಡ್ ಮಾಡಿದ್ದು, "ಉತ್ತರ ಕೊರಿಯಾದ ಸೈನಿಕರು ಮೃತ ಪಟ್ಟ ನಂತರವೂ ರಷ್ಯನ್ನರು ಅವರ ಮುಖ ಗುರುತು ಸಿಗದಂತೆ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ. ವೀಡಿಯೊದಲ್ಲಿ ಭಾಗಶಃ ಸುಟ್ಟ ಶವ ಕಾಣಿಸುತ್ತದೆ.
30 ಸೆಕೆಂಡುಗಳ ವೀಡಿಯೊದಲ್ಲಿ ಉತ್ತರ ಕೊರಿಯಾದ ಶಂಕಿತ ಸೈನಿಕನ ಹತ್ತಿರದಿಂದ ಸೆರೆಹಿಡಿದ ದೃಶ್ಯ ಮತ್ತು ಏಷ್ಯಾ ಮೂಲದ ವ್ಯಕ್ತಿಗಳ ಲಕ್ಷಣಗಳನ್ನು ಹೊಂದಿರುವ ಸೈನಿಕನೊಬ್ಬ ದೃಶ್ಯ ಸೆರೆಹಿಡಿಯದಂತೆ ಹೇಳುತ್ತಿರುವುದನ್ನು ತೋರಿಸುವ ದೃಶ್ಯಾವಳಿಗಳು ಕಾಣಿಸಿವೆ.
ಯುದ್ಧದಲ್ಲಿ ಉತ್ತರ ಕೊರಿಯಾದ ಸೈನಿಕರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಮತ್ತು ಅವರ ಉಪಸ್ಥಿತಿಯನ್ನು ಮರೆಮಾಚಲು ಪ್ರಯತ್ನಿಸಿದ್ದಕ್ಕಾಗಿ ರಷ್ಯಾದ ಮಿಲಿಟರಿಯನ್ನು ಜೆಲೆನ್ ಸ್ಕಿ ಖಂಡಿಸಿದ್ದಾರೆ. ಯೋಧರಿಗೆ ಇಂಥ ಅಗೌರವ ತೋರ್ಪಡಿಕೆಗೆ ಮಾಸ್ಕೋ ಹೊಣೆಗಾರನಾಗಿದೆ ಎಂದು ಅವರು ಆರೋಪಿಸಿದ್ದಾರೆ.