ಟೊರೊಂಟೊ(ಕೆನಡಾ): 80 ಜನರಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನ ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ವೇಳೆ ರನ್ವೇಯಲ್ಲಿ ಪಲ್ಟಿಯಾಗಿ, ತಲೆಕೆಳಗಾಗಿ ಬಿದ್ದ ಘಟನೆ ಸೋಮವಾರ ನಡೆದಿದೆ. ಈ ಘಟನೆಯಲ್ಲಿ 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, "ಡೆಲ್ಟಾ ಏರ್ಲೈನ್ಸ್ಗೆ ಸೇರಿದ 4819 ಸಂಖ್ಯೆಯ ವಿಮಾನದಲ್ಲಿ 76 ಮಂದಿ ಪ್ರಯಾಣಿಕರು ಮತ್ತು 4 ಮಂದಿ ಸಿಬ್ಬಂದಿ ಇದ್ದರು. ನಿಲ್ದಾಣದಲ್ಲಿ ವಿಮಾನ ಮಧ್ಯಾಹ್ನ 2.15ಕ್ಕೆ ಲ್ಯಾಂಡಿಂಗ್ ಆಗುತ್ತಿದ್ದಂತೆ ಈ ಅಪಘಾತ ಸಂಭವಿಸಿದೆ. ಮಗು ಸೇರಿದಂತೆ 18 ಮಂದಿಯ ಸ್ಥಿತಿ ಗಂಭೀರವಾಗಿದೆ. ಆದರೆ, ಅವರಿಗೆ ಯಾವುದೇ ಜೀವ ಭಯವಿಲ್ಲ" ಎಂದು ತಿಳಿಸಿದೆ.
ಅಮೆರಿಕದ ಮಿನ್ನೆಪೊಲಿಸ್ನಿಂದ ಆಗಮಿಸಿದ ಈ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ಏರ್ಪೋರ್ಟ್ನಲ್ಲಿ ಬಲವಾಗಿ ಗಾಳಿ ಬೀಸುತ್ತಿತ್ತು. ಜೊತೆಗೆ, ಹಿಮವೂ ಇದ್ದ ಹಿನ್ನೆಲೆಯಲ್ಲಿ ರನ್ವೇಯಲ್ಲಿ ಜಾರಿದೆ. ತಕ್ಷಣವೇ ತುರ್ತು ಸೇವಾ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ. ಅಗ್ನಿ ಅನಾಹುತ ಸಂಭವಿಸದಂತೆ ಸುತ್ತಮುತ್ತಲ ಪ್ರದೇಶಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದರು ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆನಡಾ ನಿರ್ಮಿತ ಎಂಬ್ರೇರ್ ಸಿಆರ್ಜೆ-900 ಜೆಟ್ ಅನ್ನು ಡೆಲ್ಟಾ ಅಂಗಸಂಸ್ಥೆ ಎಂಡೀವರ್ ಏರ್ ನಿರ್ವಹಿಸುತ್ತಿದೆ. ಈ ಅನಾಹುತದ ಕುರಿತು ಕೆನಡಾದ ಸಾರಿಗೆ ಭದ್ರತಾ ಮಂಡಳಿ ತನಿಖೆ ನಡೆಸಲಿದೆ. ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಇರುವಾಗ ಜೆಟ್ ಜಾರಿರುವುದು ಸಾಮಾನ್ಯ ಅಪಘಾತವಲ್ಲ ಎಂದು ತಿಳಿಸಿದ್ದು, ತನಿಖೆಗೆ ಅಮೆರಿಕ ಫೆಡರಲ್ ವೈಮಾನಿಕ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ ನೆರವು ನೀಡಲಿದೆ ಎಂದು ಫ್ಲೋರಿಡಾದ ಸೇಂಟ್ ಪಿಟರ್ಬರ್ಗ್ನಲ್ಲಿರುವ ವೈಮಾನಿಕ ಸುರಕ್ಷಾ ಸಮಾಲೋಚನ ಘಟಕದ ಸಿಇಒ ಜಾನ್ ಕಾಗ್ಸ್ ತಿಳಿಸಿದ್ದಾರೆ.