ಬೀಜಿಂಗ್ (ಚೀನಾ) :ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (WHO) ಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಚೀನಾವು ತನ್ನ ಬೆಂಬಲವನ್ನು ಪ್ರಕಟಿಸಿದೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಅಮೆರಿಕವು ಡಬ್ಲ್ಯುಎಚ್‌ಒನಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಐದು ವರ್ಷಗಳ ಅಂತರದಲ್ಲಿ ಅಮೆರಿಕವು ಎರಡನೇ ಬಾರಿಗೆ ಡಬ್ಲ್ಯೂಎಚ್ಒದಿಂದ ಹಿಂದೆ ಸರಿದಂತಾಗಿದೆ.
ಟ್ರಂಪ್ ಅವರ ಈ ನಿರ್ಧಾರ ಹೊರಬಿದ್ದ ಬಳಿಕ, ಚೀನಾವು ತನ್ನ ಬೆಂಬಲವನ್ನು ದೃಢಪಡಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಗೆ ತಮ್ಮ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಜಾಗತಿಕ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಬ್ಲ್ಯೂಎಚ್ಒ ಅಧಿಕೃತ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು, ಅದನ್ನು ದುರ್ಬಲಗೊಳಿಸಬಾರದು ಎಂದು ಗುವೊ ತಿಳಿಸಿದ್ದಾರೆ.
WHO ಟೀಕಾಕಾರ ಟ್ರಂಪ್:ಟ್ರಂಪ್ ಹಿಂದಿನಿಂದಲೂ WHO ಅನ್ನು ಟೀಕಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಬಂದ ಜೋ ಬೈಡನ್ ಟ್ರಂಪ್ ಅವರ ನಿರ್ಧಾರವನ್ನು ರದ್ದುಗೊಳಿಸಿದ್ದರು.