ಮಾಸ್ಕೋ, ರಷ್ಯಾ: ಬ್ರಿಕ್ಸ್ ದೇಶಗಳು ಹವಾಮಾನ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿವೆ. ಈ ದಿಕ್ಕಿನಲ್ಲಿ ಜಂಟಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ. ಮಾಸ್ಕೋದಲ್ಲಿ ನಡೆದ ಆಧುನಿಕ ಪರಿಸ್ಥಿತಿಗಳ ವೇದಿಕೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎರಡು ದಿನಗಳ ಬ್ರಿಕ್ಸ್ ಹವಾಮಾನ ಕಾರ್ಯಸೂಚಿ ಸಭೆಯಲ್ಲಿ ಬ್ರಿಕ್ಸ್ ದೇಶಗಳು ಹವಾಮಾನ ಮತ್ತು ಸುಸ್ಥಿರ ಅಭಿವೃದ್ಧಿಯ ಚೌಕಟ್ಟನ್ನು ಅಳವಡಿಸಿಕೊಂಡಿವೆ.
ಈ ಸಭೆಯಲ್ಲಿ ತಯಾರಿ ಮಾಡಿರುವ ಡಾಕ್ಯುಮೆಂಟ್ನಲ್ಲಿ ಹವಾಮಾನ ಕ್ರಿಯೆಯ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಳ್ಳುವಂತೆ ರೂಪಿಸಲಾಗಿದೆ. ಹವಾಮಾನ ದುಷ್ಷರಿಣಾಮ ತಗ್ಗಿಸುವಿಕೆ, ರೂಪಾಂತರ, ಕಾರ್ಬನ್ ಹೊರ ಸೂಸುವಿಕೆಗೆ ಕಡಿವಾಣ, ಹಣಕಾಸು, ವಿಜ್ಞಾನ ಮತ್ತು ವ್ಯವಹಾರ ಸೇರಿದಂತೆ ಎಲ್ಲ ಅಂಶಗಳ ಮೇಲೆ ಬೆಳಕು ಚಲ್ಲಲಾಗಿದೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಇಲಾಖೆ ಹೇಳಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಏಕಪಕ್ಷೀಯ ಹಸಿರು ರಕ್ಷಣಾ ಕ್ರಮಗಳ ಬಳಕೆಯನ್ನು ನಿಲ್ಲಿಸುವ ಅಗತ್ಯವನ್ನು ಎಲ್ಲಾ ಬ್ರಿಕ್ಸ್ ದೇಶಗಳು ಗುರುತಿಸುತ್ತವೆ ಎಂದು ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವ ಮ್ಯಾಕ್ಸಿಮ್ ರೆಶೆಟ್ನಿಕೋವ್ ಹೇಳಿದ್ದಾರೆ. ಈ ಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.