ವಾಷಿಂಗ್ಟನ್: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಯಹೂದಿ ವಿರೋಧಿ ಪ್ರತಿಭಟನೆ ಹಾಗೂ ಪ್ಯಾಲೆಸ್ಟೈನ್ ಪರವಾದ ಆಂದೋಲನಗಳನ್ನು ಕಟುವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ಗೆ ಅಮೆರಿಕವು ಉಕ್ಕಿನಷ್ಟು ದೃಢವಾಗಿ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಪುನರುಚ್ಚರಿಸಿದ್ದಾರೆ.
"ಯಹೂದಿ ಜನರ ಸುರಕ್ಷತೆ, ಇಸ್ರೇಲ್ನ ಭದ್ರತೆ ಮತ್ತು ಇಸ್ರೇಲ್ ಸ್ವತಂತ್ರ ಯಹೂದಿ ರಾಷ್ಟ್ರವಾಗಿ ಅಸ್ತಿತ್ವದಲ್ಲಿರುವ ಅದರ ಹಕ್ಕಿನ ಬಗ್ಗೆ ನನ್ನ ಬದ್ಧತೆ ದೃಢವಾಗಿದೆ. ಎರಡೂ ದೇಶಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಉಂಟಾದಾಗಲೂ ಸಹ ಈ ವಿಷಯದಲ್ಲಿ ನಮ್ಮ ನಿಲುವು ಬದಲಾಗದು" ಎಂದು ಬೈಡನ್ ಮಂಗಳವಾರ ಹೇಳಿದರು. ಯುಎಸ್ ರಾಜಧಾನಿ ವಾಷಿಂಗ್ಟನ್ನಲ್ಲಿ ಹೊಲೊಕಾಸ್ಟ್ (ಯಹೂದಿಗಳ ನರಮೇಧ) ಹತ್ಯಾಕಾಂಡದ ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಅಮೆರಿಕದ ಯಾವುದೇ ಕ್ಯಾಂಪಸ್ನಲ್ಲಿ ಅಥವಾ ರಾಷ್ಟ್ರದ ಯಾವುದೇ ಸ್ಥಳದಲ್ಲಿ ಯಹೂದಿ ವಿರೋಧಿ ಪ್ರತಿಭಟನೆ, ದ್ವೇಷ ಭಾಷಣ ಮತ್ತು ಯಾವುದೇ ರೀತಿಯ ಹಿಂಸಾಚಾರಗಳಿಗೆ ಅವಕಾಶ ನೀಡುವುದಿಲ್ಲ" ಎಂದು ಅವರು ಹೇಳಿದರು.
ಅಮೆರಿಕದ ಕೆಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಪ್ಯಾಲೆಸ್ಟೈನ್ ಬೆಂಬಲಿಸಿ ರ್ಯಾಲಿಗಳನ್ನು ನಡೆಸಲಾಗುತ್ತಿದ್ದು, ಬೈಡನ್ ಅವರ ಮಧ್ಯಪ್ರಾಚ್ಯ ನೀತಿಯನ್ನು ಹೋರಾಟಗಾರರು ಖಂಡಿಸಿದ್ದಾರೆ. ಆದಾಗ್ಯೂ ಗಾಜಾದಲ್ಲಿ ಯುದ್ಧ ಮುಂದುವರೆಯುತ್ತಿರುವ ರೀತಿಯ ವಿಷಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಬೈಡನ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.