ಢಾಕಾ (ಬಾಂಗ್ಲಾದೇಶ):ವಿದ್ಯಾರ್ಥಿಗಳ ದಂಗೆಗೆ ಬೆದರಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಪರಾರಿಯಾಗಿ ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮದ್ ಯೂನುಸ್ ಕಿಡಿಕಾರಿದ್ದಾರೆ. ಅವರನ್ನು ಮತ್ತೆ ಬಾಂಗ್ಲಾದೇಶಕ್ಕೆ ಕರೆತಂದು ಸಾರ್ವಜನಿಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಗುಡುಗಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಶೇಕ್ ಹಸೀನಾ ಅವರು ಬಾಂಗ್ಲಾದೇಶದ ಬಗ್ಗೆ ಭಾರತದಲ್ಲಿ ಕುಳಿತು ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಅವರನ್ನು ಗಡಿಪಾರು ಮಾಡಲು ಕೇಳುವವರೆಗೆ ಮಾತ್ರ ಭಾರತದಲ್ಲಿ ನೆಮ್ಮದಿಯಾಗಿ ಉಳಿಯಲು ಸಾಧ್ಯ. ಅವರ ಇಲ್ಲಿನ ವಿದ್ಯಮಾನಗಳ ಬಗ್ಗೆ ಮಾತನಾಡದೇ ಇರುವುದು ಅವರಿಗೇ ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಉತ್ತಮ ಬಾಂಧವ್ಯವಿದೆ. ಉಭಯ ರಾಷ್ಟ್ರಗಳ ನಡುವೆ ಕಂದಕ ಉಂಟಾಗದಿರಲು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮೌನವಾಗಿರಬೇಕು. ಅಲ್ಲಿದ್ದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಅಡ್ಡಿಯಾಗಲಿದೆ. ಇದನ್ನು ಭಾರತ ಸರ್ಕಾರವೂ ತಡೆಯಬೇಕು ಎಂದು ಸಲಹೆ ನೀಡಿದರು.
ಹಸೀನಾ ಗಡೀಪಾರಿಗೆ ಕೇಳುತ್ತೇವೆ:ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ಅವರನ್ನು ಅಲ್ಲಿಂದ ಗಡೀಪಾರು ಮಾಡಲು ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ಕೇಳಲಿದೆ. ಭಾರತದಲ್ಲಿ ಇದ್ದುಕೊಂಡು ಆಕೆ ನೀಡುತ್ತಿರುವ ಹೇಳಿಕೆಗಳು ಉತ್ತಮವಾಗಿಲ್ಲ. ಅವರನ್ನು ದೇಶದ ಜನರು ಮರೆಯಲು ಬಯಸಿದ್ದಾರೆ. ಬಾಂಗ್ಲಾದ ಬಗ್ಗೆ ಮಾತನಾಡದೇ ಹೋದಲ್ಲಿ ಅವರನ್ನು ಜನರೂ ಕೂಡ ನಿರ್ಲಕ್ಷಿಸುತ್ತಾರೆ. ಹಾಗೊಂದು ವೇಳೆ ಕೆಣಕಿದಲ್ಲಿ ಅವರನ್ನು ದೇಶಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದರು.