ಬಾಲ್ಟಿಮೋರ್(ಯುಎಸ್‌ಎ):ಇಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ 8 ಜನರ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು 6 ಜನ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಆಗಿದ್ದೇನು?: ಸರಕು ಸಾಗಣೆ ಹಡಗೊಂದು ಮಂಗಳವಾರ ಇಂಜಿನ್ ವೈಫಲ್ಯದಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಇಡೀ ಸೇತುವೆ ಕುಸಿದು ಪಾಟಾಪ್‌ಸ್ಕೋ ನದಿಗೆ ಬಿತ್ತು. ಸೇತುವೆ ಮೇಲಿದ್ದ 8 ಜನರು ನೀರಿಗೆ ಬಿದ್ದರು. ತಕ್ಷಣ ಇಬ್ಬರನ್ನು ರಕ್ಷಿಸಲಾಗಿತ್ತು. ಉಳಿದಂತೆ ಆರು ಮಂದಿ ಕಾಣೆಯಾಗಿದ್ದು ಶೋಧ ಕಾರ್ಯ ಮುಂದುವರೆಸಲಾಗಿದೆ. ರಕ್ಷಣಾ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದರೂ ಯಾರೂ ಪತ್ತೆಯಾಗದ ಕಾರಣ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಈ ಭೀಕರ ಘಟನೆಗೆ ಯುಎಸ್‌ಎ ಅಧ್ಯಕ್ಷ ಜೋ ಬೈಡನ್ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದರು. "ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆಸಲಾಗುತ್ತದೆ. ರಕ್ಷಿಸಲ್ಪಟ್ಟ ಇಬ್ಬರ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ ಮುಂದಿನ ಸೂಚನೆ ಬರುವವರೆಗೆ ಬಾಲ್ಟಿಮೋರ್ ಬಂದರಿನಲ್ಲಿ ಹಡಗು ಸಂಚಾರ ಸ್ಥಗಿತಗೊಳಿಸಲಾಗಿದೆ. ಹಡಗು ಸಂಚಾರವನ್ನು ಮತ್ತೆ ಪುನರಾರಂಭಿಸುವ ಮೊದಲು ಸೇತುವೆಯನ್ನು ಸರಿಪಡಿಸಲಾಗುತ್ತದೆ. ಇದೊಂದು ಅನಿರೀಕ್ಷಿತ ದುರಂತ. ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಲ್ಲ" ಎಂದು ಸ್ಫಷ್ಟಪಡಿಸಿದರು.
ಘಟನೆಗೂ ಮುನ್ನ 8 ಜನ ಸೇತುವೆ ಮಧ್ಯದಲ್ಲಿ ರಸ್ತೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು ಎಂದು ಬ್ರೌನರ್ ಬಿಲ್ಡರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಫ್ರೆ ಪ್ರಿಟ್ಜ್ಕರ್ ತಿಳಿಸಿದ್ದಾರೆ.