ಗಾಜಾ, ಪ್ಯಾಲಿಸ್ಟೈನ್: ಉತ್ತರ ಗಾಜಾ ಪಟ್ಟಿಯಲ್ಲಿರುವ ಜಬಾಲಿಯಾ ಶಿಬಿರದ ಮೇಲೆ ಶುಕ್ರವಾರ ಸಂಜೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 33 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ಮೃತರಲ್ಲಿ 21 ಮಹಿಳೆಯರಿದ್ದಾರೆ, ಅವಶೇಷಗಳು ಮತ್ತು ಕಟ್ಟಡಗಳ ಅಡಿ ಇನ್ನೂ ಹಲವರು ಸಿಲುಕಿರುವ ಹಿನ್ನೆಲೆಯಲ್ಲಿ ಸಾವುಗಳ ಸಂಖ್ಯೆ 50 ತಲುಪಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬಾಂಬ್ ಸ್ಫೋಟದಲ್ಲಿ 85 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಸ್ಥಳೀಯ ವರದಿಗಳನ್ನು ಆಧರಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಸೇನೆಯು ಜಬಾಲಿಯಾ ಕ್ಯಾಂಪ್‌ನಲ್ಲಿರುವ ಹಲವಾರು ಮನೆಗಳ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಅದು ವಿವರಿಸಿದೆ. ಆದರೆ ಘಟನೆಯ ಬಗ್ಗೆ ಇಸ್ರೇಲ್ ಸೇನೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಗಡಿಯ ಮೂಲಕ ಹಮಾಸ್ ಆಕ್ರಮಣ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ಆಕ್ರಮಣವನ್ನು ನಡೆಸುತ್ತಿದೆ. ಕಳೆದ ಒಂದು ವರ್ಷದಿಂದ ಈ ಯುದ್ಧ ಮುಂದುವರೆದಿದೆ. 2023 ಅಕ್ಟೋಬರ್ನಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್ನಲ್ಲಿ 1,200 ಜನರು ಸಾವನ್ನಪ್ಪಿದರು. ಸುಮಾರು 250 ಜನರನ್ನು ಹಮಾಸ್ ಒತ್ತೆಯಾಳಾಗಿಸಿಕೊಂಡಿದ್ದರು.