ಟೋಕಿಯೊ (ಜಪಾನ್): ಜಪಾನ್ನಲ್ಲಿ ವಯಸ್ಸಾಗುತ್ತಿರುವವರ ಜನಸಂಖ್ಯೆ ಹೆಚ್ಚುತ್ತಿರುವ ಮತ್ತು ಕ್ಷೀಣಿಸುತ್ತಿರುವ ಹೆರಿಗೆಗಳ ಕುರಿತು ಕಳವಳ ಹೆಚ್ಚುತ್ತಿರುವ ನಡುವೆಯೇ ಫೆಬ್ರುವರಿ 17ರಂದು ಇವಾಟ್ ಪ್ರಿಫೆಕ್ಚರ್‌ನಲ್ಲಿ ಕೊನೆಯ ಬಾರಿಗೆ ಬೆತ್ತಲೆ ಪುರುಷ ಉತ್ಸವ ಆಯೋಜಿಸಲಾಗಿತ್ತು ಎಂದು ಜಪಾನ್‌ನ ಅಸಾಹಿ ಶಿಂಬುನ್ ಪತ್ರಿಕೆ ವರದಿ ಮಾಡಿದೆ.
ಜಪಾನ್‌ನ ಪುರುಷರು ಜಗಳದಲ್ಲಿ ತೊಡಗುವ ವಿಲಕ್ಷಣ ಉತ್ಸವಕ್ಕೆ ಸೊಮಿನ್-ಸಾಯಿ ಎಂದು ಕರೆಯಲಾಗುತ್ತಿದೆ. ಈ ಉತ್ಸವದಲ್ಲಿ ಸಾವಿರಾರು ಪುರುಷರು ಸೊಂಟಕ್ಕೆ ಮಾತ್ರ ಬಟ್ಟೆ ಕಟ್ಟಿಕೊಂಡು ಬಹುತೇಕ ಬೆತ್ತಲಾಗಿ ಪಾಲ್ಗೊಳ್ಳುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸುತ್ತಿರುವ ಜನರಿಗೆ ತುಂಬಾ ವಯಸ್ಸಾಗುತ್ತಿರುವ ಕಾರಣ 1000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಉತ್ಸವವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೊಕುಸೆಕಿಜಿ ದೇವಾಲಯ ತಿಳಿಸಿದೆ.
ಈ ದೇವಾಲಯದ ಹೇಳಿಕೆಯನ್ನು ಉಲ್ಲೇಖಿಸಿದ ಅಸಾಹಿ ಶಿಂಬುನ್ ಪತ್ರಿಕೆಯು, ಈ ಸಂಪ್ರದಾಯವನ್ನು ಮುಂದುವರಿಸಲು ಉತ್ತರಾಧಿಕಾರಿಗಳ ಕೊರತೆಯೂ ಇದೆ ಎಂದು ವರದಿ ಮಾಡಿದೆ. ಶನಿವಾರ ಕೊನೆಯ ಬಾರಿಗೆ ಆಯೋಜಿಸಲಾಗಿದ್ದ ಪ್ರಸಿದ್ಧ ಬೆತ್ತಲೆ ಪುರುಷ ಉತ್ಸವದಲ್ಲಿ ಕೇವಲ 'ಫಂಡೋಶಿ' ಎಂಬ ಲಾಂಛನ ಧರಿಸಿದ್ದವರು ಲಾಟೀನುಗಳನ್ನು ಹಿಡಿದು ಯಮೌಚಿಗವಾ ನದಿಯಲ್ಲಿ ಸ್ನಾನ ಮಾಡಿದರು.
ಅಲ್ಲಿಂದ ಬಳಿಕ ದೇವಾಲಯದ ಯಕುಶಿಡೋ ಸಭಾಂಗಣದಲ್ಲಿ ಸಮೃದ್ಧವಾದ ಸುಗ್ಗಿಯ ಮತ್ತು ಇತರ ಅನುಗ್ರಹಗಳಿಗಾಗಿ ಪ್ರಾರ್ಥಿಸಿದರು. ನಂತರ ತಾಲಿಸ್ಮನ್ಗಾಗಿ ಸೋಮಿನ್-ಬುಕುರೊ ಎಂದು ಕರೆಯಲ್ಪಡುವ ಸೆಣಬಿನ ಚೀಲದ ಮೇಲೆ ಸೇರಿಕೊಂಡು ನೂಕುನುಗ್ಗಲಿನಿಂದ ಉತ್ಸವದಲ್ಲಿ ತೊಡಗಿದರು. ಈ ತಾಲಿಸ್ಮನ್ ತೆಗೆದುಕೊಳ್ಳುವ ವ್ಯಕ್ತಿಯು ಯಾವುದೇ ರೀತಿಯ ವಿಪತ್ತಿನಿಂದ ರಕ್ಷಿಸಲ್ಪಡುತ್ತಾನೆ ಎಂಬ ನಂಬಿಕೆ ಇದೆ.
ಮತ್ತೊಂದೆಡೆ, ಪಶ್ಚಿಮ ಜಪಾನ್‌ನ ಒಕಯಾಮಾ ಪ್ರಾಂತ್ಯದಲ್ಲಿರುವ ಸೈದಾಜಿ ದೇವಾಲಯದಲ್ಲಿ 'ಇಯೋ ಹಬ್ಬ' ಎಂದೂ ಕರೆಯಲ್ಪಡುವ ಬೆತ್ತಲೆ ಹಬ್ಬವನ್ನು ಆಚರಿಸಲಾಯಿತು. ಮರದ ತುಂಡುಗಳನ್ನು ಹಿಡಿಯಲು ಅರೆಬೆತ್ತಲೆ ಪುರುಷರು ಪೈಪೋಟಿಗೆ ಇಳಿಯುವ ಸಂಪ್ರದಾಯ ಇದಾಗಿದೆ. ಒಕಯಾಮಾ ದೇವಾಲಯದ ಉತ್ಸವವು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ನಡೆದ ಉತ್ಸವದಲ್ಲಿ ಸುಮಾರು 9,000 ಪುರುಷರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಜಪಾನ್‌ನ ಜನಸಂಖ್ಯೆಯು 1.3ರ ಫಲವತ್ತತೆ ದರದೊಂದಿಗೆ ಸ್ಥಿರವಾಗಿ ಕುಸಿಯುತ್ತಿದೆ. ದೇಶದಲ್ಲಿ ಸಾವಿನ ಸಂಖ್ಯೆಯು ಹತ್ತು ವರ್ಷಗಳಿಂದ ಜನನಗಳ ಸಂಖ್ಯೆಯನ್ನು ಮೀರಿದೆ. ಇದು ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶದಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ರಾಷ್ಟ್ರವು ಜಾಗತಿಕವಾಗಿ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದೆ. ಇದು ವೇಗವಾಗಿ ಬೆಳೆಯುತ್ತಿರುವ ಹಿರಿಯರ ಜನಸಂಖ್ಯೆಗೂ ಕಾರಣವಾಗಿದೆ.
ಇದನ್ನೂ ಓದಿ:ಆರ್ಥಿಕ ಕುಸಿತ: ಚೀನಾದಲ್ಲಿ ಕಾರ್ಮಿಕರ ಪ್ರತಿಭಟನೆ ತೀವ್ರ ಹೆಚ್ಚಳ