ನೈರೋಬಿ (ಕೀನ್ಯಾ):ಕೀನ್ಯಾದ ಶಾಲಾ ವಸತಿ ನಿಲಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, 17 ವಿದ್ಯಾರ್ಥಿಗಳು ಬೆಂಕಿಗಾಹುತಿಯಾಗಿದ್ದಾರೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ನೈರಿ ಕೌಂಟಿಯ ಹಿಲ್‌ಸೈಡ್ ಎಂಡರಾಶಾ ಪ್ರಾಥಮಿಕ ವಸತಿ ನಿಲಯದಲ್ಲಿ ಇದ್ದಕ್ಕಿದ್ದಂತೆ ಈ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ತನಿಖೆ ನಡೆಸಲಾಗುತ್ತದೆ. ಬೆಂಕಿಗೆ ಆಹುತಿಯಾದ ವಸತಿ ನಿಲಯದಲ್ಲಿ 10 ರಿಂದ 14 ವರ್ಷ ವಯಸ್ಸಿನ 150ಕ್ಕೂ ಹೆಚ್ಚು ಮಕ್ಕಳು ವಾಸಿಸುತ್ತಿದ್ದರು. ಕಟ್ಟಡಗಳನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿದ್ದರಿಂದ, ಬೆಂಕಿ ವೇಗವಾಗಿ ಹರಡಿದೆ. ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆ ಕಟ್ಟಡ ಭಾಗಶಃ ಸುಟ್ಟು ಹೋಗಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಎಂದು ಪೊಲೀಸರು ತಿಳಿಸಿದ್ದಾರೆ.